ಪ್ರಾತಿನಿಧಿಕ ಚಿತ್ರ
ಕುಷ್ಟಗಿ: ತಾಲ್ಲೂಕಿನ ತಾವರಗೇರಾದಲ್ಲಿನ ರಾಯನಕೆರೆ ನೀರಾವರಿ ಕಾಲುವೆ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಭೂಮಿಯನ್ನು ಸಂಬಂಧಿಸಿದ ಪಹಣಿಗಳಲ್ಲಿ ‘ಸಣ್ಣ ನೀರಾವರಿ ಇಲಾಖೆ ಭೂಮಿ’ ಎಂದು ನಮೂದಿಸುವ ಇಂಡೀಕರಣ ಕೆಲಸಕ್ಕೆ ಕಂದಾಯ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿದೆ. ಅದೇ ರೀತಿ ನಾಪತ್ತೆಯಾಗಿರುವ ಕಾಲುವೆ ಪತ್ತೆ ಹಚ್ಚಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ.
ರಾಯನಕೆರೆ ನಿರ್ಮಾಣದ ನಂತರ ರೈತರ ಜಮೀನುಗಳಿಗೆ ನೀರು ಹರಿಸಲು ಕಾಲುವೆಗೆ ಅಗತ್ಯವಾಗಿದ್ದ ಜಮೀನನ್ನು ಸರ್ಕಾರ ಮೂರು ದಶಕಗಳ ಹಿಂದೆಯೇ ಹಿಡುವಳಿದಾರರಿಂದ ಸ್ವಾಧೀನಪಡಿಸಿಕೊಂಡು ಅದಕ್ಕೆ ಭೂ ಪರಿಹಾರ ಧನವನ್ನೂ ಸಂಬಂಧಿಸಿದ ಭೂ ಮಾಲೀಕರಿಗೆ ನೀಡಿತ್ತು. ಆದರೆ ಸ್ವಾಧೀನಗೊಂಡ ಭೂಮಿಯ ಒಡೆತನ ಸಣ್ಣ ನೀರಾವರಿ ಇಲಾಖೆ ಹೆಸರಿನಲ್ಲಿ ಪಹಣಿಗಳಲ್ಲಿ ನಮೂದಾಗಬೇಕಿದ್ದರೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈವರೆಗೂ ಪಹಣಿಗಳಲ್ಲಿ ನಮೂದಾಗಿರಲಿಲ್ಲ.
ಅಧಿಕಾರಿಗಳ ಉದ್ದೇಶಪೂರ್ವಕ ಬೇಜವಾಬ್ದಾರಿಯನ್ನು ದುರ್ಬಳಕೆ ಮಾಡಿಕೊಂಡ ಕೆಲ ಭೂ ಮಾಲೀಕರು ಕಾಲುವೆಗೆ ಸ್ವಾಧೀನವಾಗಿದ್ದ ಭೂಮಿಯನ್ನೂ ಸೇರಿಸಿ ಅಕ್ರಮವಾಗಿ ಭೂ ಪರಿವರ್ತನೆ ಮಾಡಿಸಿಕೊಂಡು ನಂತರ ಅದನ್ನು ವಸತಿ ಬಡಾವಣೆಯನ್ನಾಗಿಸಿ ನಿವೇಶನಗಳನ್ನೂ ಮಾರಾಟ ಮಾಡಿದ್ದರೆ, ಇನ್ನೂ ಕೆಲವರು ಕಾಲುವೆಯನ್ನೆಲ್ಲ ಮುಚ್ಚಿ ಸಮತಟ್ಟು ಮಾಡಿಕೊಂಡಿದ್ದಾರೆ.
ಈ ವಿಷಯ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಯಲ್ಲಿ ಸರಣಿ ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ ಕಾಲುವೆ ಪ್ರದೇಶ ಸರ್ವೆ ನಡೆಸಿ ಹದ್ದುಬಸ್ತು ಮಾಡಿಕೊಡುವಂತೆ ಭೂ ಮಾಪನ ಇಲಾಖೆಗೆ ಪತ್ರ ಬರೆದಿತ್ತು. ಆದರೆ ಪಹಣಿಗಳಲ್ಲಿ ಸಣ್ಣ ನೀರಾವರಿ ಇಲಾಖೆ ಹೆಸರೇ ಇಲ್ಲದ ಕಾರಣ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಭೂ ಮಾಪನ ಇಲಾಖೆ ಸಣ್ಣ ನೀರಾವರಿ ಇಲಾಖೆಗೆ ಪತ್ರದ ಮೂಲಕ ತಿಳಿಸಿತ್ತು.
ಸ್ವಾಧೀನವಾಗಿದ್ದ ಭೂಮಿಯ ಪ್ರದೇಶ ಪಹಣಿಗಳಲ್ಲಿ ನಮೂದಿಸುವ ಕೆಲಸ ಕಂದಾಯ ಇಲಾಖೆಯದ್ದಾದರೂ ಸಣ್ಣ ನೀರಾವರಿ ಇಲಾಖೆಯೂ ಈ ವಿಷಯದಲ್ಲಿ ಆಸಕ್ತಿ ತಳೆಯದೆ ಭೂ ಮಾಲೀಕರ ಅಕ್ರಮಕ್ಕೆ ಪರೋಕ್ಷ ಸಹಕಾರ ನೀಡುತ್ತ ಬಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ರಾಯನಕೆರೆ ಕಾಲುವೆಗೆ ಸರ್ಕಾರ ಸ್ವಾಧೀನಪಡಿಸಿಕೊಂಡ ಜಮೀನು ಎಷ್ಟು ಎಷ್ಟು ಜನರಿಗೆ ಪರಿಹಾರ ನೀಡಲಾಗಿದೆ ಎಂಬ ದಾಖಲೆಗಳು ನೀಡಬೇಕು. ಅದೇ ರೀತಿ ಪಹಣಿಗಳಲ್ಲಿ ನೀರಾವರಿ ಇಲಾಖೆಯ ಹೆಸರನ್ನು ನಮೂದಿಸಿ ಇಂಡೀಕರಣಗೊಳಿಸುವಂತೆ ಕೋರಿ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗಾಧಿಕಾರಿ ಕಚೇರಿಗೆ ನಾಲ್ಕು ತಿಂಗಳ ಅವಧಿಯಲ್ಲಿ ಎರಡು ಬಾರಿ ಪತ್ರ ಬರೆದಿತ್ತಾದರೂ ಉಪ ವಿಭಾಗಾಧಿಕಾರಿ ಕಚೇರಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿರಲಿಲ್ಲ ಎಂದು ತಿಳಿದಿದೆ.
ಎಇಇ ಹೇಳಿದ್ದು: ಈ ಕುರಿತು ವಿವರಿಸಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೇವೇಂದ್ರಪ್ಪ, ಸರ್ವೆ ಇಲಾಖೆಯವರು ಪ್ರಸಕ್ತ ಪಹಣಿ, ಜೆಎಂಸಿ ನಕ್ಷೆ ದಾಖಲೆಗಳನ್ನು ಕೇಳುತ್ತಿದ್ದಾರೆ. ಆದರೆ ಇವು ಹಳೆಯ ದಾಖಲೆಗಳಾಗಿದ್ದರಿಂದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಹುಡುಕಬೇಕಿದ್ದು ಹುಡುಕುವ ಕೆಲಸಕ್ಕೆ ನಮ್ಮ ಇಲಾಖೆಯ ಸಿಬ್ಬಂದಿ ಒಬ್ಬರನ್ನು ನಿಯೋಜನೆ ಮಾಡುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.