ADVERTISEMENT

ಲಾಕ್‌ಡೌನ್‌ ಮುಂದುವರಿಸುವ ಸಾಧ್ಯತೆ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಕುಷ್ಟಗಿಯ ಕೊರೊನಾ ನಿರಾಶ್ರಿತರ ಕೇಂದ್ರಕ್ಕೆ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 10:46 IST
Last Updated 8 ಏಪ್ರಿಲ್ 2020, 10:46 IST
ಕುಷ್ಟಗಿಯಲ್ಲಿನ ಕೊರೊನಾ ನಿರಾಶ್ರಿತರ ಕೇಂದ್ರಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿ ನೀಡಿದರು
ಕುಷ್ಟಗಿಯಲ್ಲಿನ ಕೊರೊನಾ ನಿರಾಶ್ರಿತರ ಕೇಂದ್ರಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿ ನೀಡಿದರು   

ಕುಷ್ಟಗಿ: ‘ಕೊರೊನಾ ಸೋಂಕು ರಾಜ್ಯದಲ್ಲಿ ಮೂರನೇ ಹಂತ ತಲುಪದಂತೆ ನೋಡಿಕೊಳ್ಳಲು ಸರ್ಕಾರ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆಸಿದೆ. ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದರೆ ರಾಜ್ಯದಲ್ಲಿ ಇನ್ನಷ್ಟು ದಿನಗಳವರೆಗೆ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ ಇದೆ’ ಎಂದು ಉಪ ಮುಖ್ಯಮಂತ್ರಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಮಂಗಳವಾರ ಇಲ್ಲಿಯ ಕೊರೊನಾ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ನಂತರ ಪತ್ರಕರ್ತರೊಂದಿಗೆ ಮಾತ
ನಾಡಿ,‘ಏ.14ರವರೆಗೆ ಲಾಕ್‌ಡೌನ್‌ ಗಡುವು ಇದೆ. ರಾಜ್ಯವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ನಿರ್ಬಂಧ ಮುಂದುವರೆಸುವ ಅನಿವಾರ್ಯತೆ ಎದುರಾಗಬಹುದು’ ಎಂದರು.

ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಕಾರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್‌ಡೌನ್‌ ಜಾರಿಗೆ ತರಲಾಗಿದೆ. ಸದ್ಯ ಜನರ ಓಡಾಟವನ್ನು ಗಮನಿಸಿದರೆ ರಾಜ್ಯದ ಜನರೂ ಲಾಕ್‌ಡೌನ್‌ಗೆ ಸ್ಪಂದಿಸದಿರುವುದು ತಮಗೆ ಸಮಾಧಾನ ತಂದಿಲ್ಲ. ಕರ್ನಾಟಕ ಸೇರಿದಂತೆ ದೇಶದ ಎಲ್ಲಿಯೂ ಸಂಪೂರ್ಣ ಲಾಕ್‌ಡೌನ್‌ ಜಾರಿಗೆ ಬಂದಿಲ್ಲ. ಹಾಗಾಗಿ ಎಲ್ಲಿಯವರೆಗೆ ಇದೇ ಸ್ಥಿತಿ ಮುಂದುವರೆಯುತ್ತದೆಯೊ ಅಲ್ಲಿಯವರೆಗೆ ಸೋಂಕು ತಡೆಯುವುದು ಕಷ್ಟ. ಇಡೀ ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ಸಮುದಾಯದ ಮೇಲೆ ಇದೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಜನರು ತಾವೇ ಸ್ವಯಂ ಪ್ರೇರಣೆಯಿಂದ ನಿರ್ಬಂಧ ವಿಧಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಪರೀಕ್ಷೆ ಅನಿಶ್ಚಿತ: ಈ ಮಧ್ಯೆ ಲಾಕ್‌ಡೌನ್‌ ಮುಂದುವರೆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಸೇರಿದಂತೆ ಎಲ್ಲವನ್ನೂ ಮುಂದೂಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಬೆಳಗಾವಿ ಜಿಲ್ಲೆಯ ಕುಡಚಿ ಗ್ರಾಮದಲ್ಲಿ ನಾಲ್ವರು, ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಇದೆಲ್ಲವನ್ನೂ ಕೂಲಂಕಷವಾಗಿ ನೋಡಿದಾಗ ಇವರ ಸಂಬಂಧಿಕರಿಂದ ಸೋಂಕು ಹರಡಿದೆ ಎಂದರು. ರಾಜ್ಯದೆಲ್ಲೆಡೆ ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ಜನರ ಪ್ರಾಣ ಉಳಿಸಲು ಹರಸಾಹಸ ನಡೆಸುತ್ತಿದ್ದು ಅವರಿಗೆ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಉಪಮುಖ್ಯಮಂತ್ರಿ, ಕೊಪ್ಪಳ ಜಿಲ್ಲಾಡಳಿತ ಉತ್ತಮ ಪ್ರಯತ್ನ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಮಹೇಶ, ವಿಜಯ ನಾಯಕ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹಾಂತೇಶ ಬದಾಮಿ, ತಹಶೀಲ್ದಾರ್ ಎಂ.ಸಿದ್ದೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಚಂದ್ರಶೇಖರ. ಸಮಾಜ ಕಲ್ಯಾಣ ಅಧಿಕಾರಿ ದೇವಲ ನಾಯಕ, ಬಿಸಿಎಂ ಇಲಾಖೆ ಅಧಿಕಾರಿ ಗ್ಯಾನನಗೌಡ. ಬಸವರಾಜ ಹಾಗೂ ಪೀಕಾರ್ಡ್ ಬ್ಯಾಂಕ್‌ ಅಧ್ಯಕ್ಷ ಭರಮಗೌಡ ಬ್ಯಾಲಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.