ADVERTISEMENT

ಜೆಡಿಎಸ್‌ನಲ್ಲಿ ಬಕೆಟ್ ಹಿಡಿಯುವವರಿಗೆ ಮಣೆ: ಉಪಾಧ್ಯಕ್ಷ ಪ್ರದೀಪ್‌ಗೌಡ ಪಾಟೀಲ

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 3:45 IST
Last Updated 10 ಜುಲೈ 2021, 3:45 IST

ಕೊಪ್ಪಳ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ ನೆಲೆ ಕಳೆದುಕೊಂಡಿದೆ. ಅಲ್ಲಿ ಬಕೆಟ್‌ ಹಿಡಿಯುವವರಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರದೀಪ್‌ಗೌಡ ಪಾಟೀಲ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಕ.ಕ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಮನನೊಂದು ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಅವರು ತಿಳಿಸಿದರು.

ದಶಕದಿಂದ ಪಕ್ಷ ಸಂಘಟನೆಗಾಗಿ ದುಡಿದಿದ್ದೇನೆ. ಆದರೆ, ಸೂಕ್ತ ಸ್ಥಾನಮಾನ ದೊರೆಯಲಿಲ್ಲ. ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಆಗಲೂ ವರಿಷ್ಠರು ಬೆಂಬಲ ನೀಡಲಿಲ್ಲ. ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎಂದರು.

ADVERTISEMENT

ನನ್ನ ಹಿಂದೆಯೇ ಜಿಲ್ಲೆಯ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡಲಿದ್ದಾರೆ. ಕ್ಷೇತ್ರದ ಜನರು ನನ್ನ ಬೆಂಬಲಕ್ಕಿದ್ದು, ಎಲ್ಲರೊಡನೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸುವೆ ಎಂದರು.

ಪ್ರದೀಪಗೌಡ ಕೊಪ್ಪಳ ಜಿಲ್ಲೆಯ ಪ್ರಭಾವಿ ಜೆಡಿಎಸ್‌ ಮುಖಂಡರಾಗಿದ್ದು, ಅಳವಂಡಿ-ಕವಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಬಿಜೆಪಿ ಅವರನ್ನು ಸಂಪರ್ಕಿಸಿದ್ದು, ನಿರ್ಧಾರ ಕೈಗೊಂಡಿಲ್ಲ. ಗ್ರಾಮೀಣ ಭಾಗದಲ್ಲಿ ಬಿಜೆಪಿ ದುರ್ಬಲವಿದ್ದು, ಪ್ರದೀಪ್‌ಗೌಡ ಪಾಟೀಲ ಪಕ್ಷ ಸೇರಿದರೆ ಲಾಭವಾಗಲಿದೆ ಎಂಬುವುದು ಪಕ್ಷದ ಮುಖಂಡರ ಅಂಬೋಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.