ಕುಷ್ಟಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಜನಪರ ಗ್ಯಾರಂಟಿ ಯೋಜನೆ ವ್ಯಾಪ್ತಿಗೆ ತಾಲ್ಲೂಕಿನಲ್ಲಿ ಎಲ್ಲ ಫಲಾನುಭವಿಗಳನ್ನು ತರುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು.
ಮಂಗಳವಾರ ಇಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ನೋಂದಾಯಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಯಲ್ಲಿ ಹೇಗೆ ಸೇರ್ಪಡೆಯಾಗಬೇಕು ಎಂಬುದು ಗ್ರಾಮಾಂತರ ಪ್ರದೇಶದ ಅನೇಕ ಜನರಿಗೆ ಮಾಹಿತಿ ಇಲ್ಲದ ಕಾರಣ ಗೃಹಲಕ್ಷ್ಮಿ ಯೋಜನೆಯಲ್ಲಿ ಇನ್ನೂ ಬಹಳಷ್ಟು ಮಹಿಳೆಯರು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದರು.
ಯುವನಿಧಿ, ಶಕ್ತಿ, ಅನ್ನಭಾಗ್ಯ ಯೋಜನೆಗಳ ಫಲ ಪಡೆಯದ ಅನೇಕ ಜನರಿದ್ದು ಅವರನ್ನು ಗುರುತಿಸಿ ಯೋಜನೆಗಳ ವ್ಯಾಪ್ತಿಗೆ ಒಳಪಡಿಸಲು ಇನ್ನೂ ಅವಕಾಶವಿದೆ. ಈ ಯೋಜನೆಗಳ ಫಲ ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಂಬಂಧಿಸಿದ ಕಾರ್ಯಕರ್ತರು ಹೆಚ್ಚಿನ ಮುತುವರ್ಜಿ ವಹಿಸಿದರೆ ಸರ್ಕಾರಕ್ಕೂ ಜನರಿಗೆ ಪ್ರಯೋಜನ ದೊರೆಯುವುದರ ಜೊತೆಗೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀನಿವಾಸ ರಡ್ಡಿ ಮಾತನಾಡಿ, ಕುಷ್ಟಗಿ ತಾಲ್ಲೂಕು ಫಲಾನುಭವಿಗಳ ಹೆಸರು ನೋಂದಣಿ ಅಭಿಯಾನ ಆರಂಭಗೊಂಡಿರುವುದು ಜಿಲ್ಲೆಯಲ್ಲೇ ಮೊದಲು. ಅರ್ಹ ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸೇರಿದ ಇಲಾಖೆಗಳ ಅಧಿಕಾರಿಗಳ ಮೇಲಿದೆ. ಈ ವಿಷಯದಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಸಮಿತಿಗಳೂ ನೆರವಿಗೆ ಬರಲಿವೆ ಎಂದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರುಕ್ ಡಲಾಯತ್ ಮತ್ತು ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಇತರರು ಹಾಜರಿದ್ದರು. ಜು.30 ರಂದು ಸಹ ನೋಂದಣಿ ಅಭಿಯಾನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.