ನಗದು ಪತ್ತೆ
ಕೊಪ್ಪಳ: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಮುಖ್ಯ ಆಡಳಿತಾಧಿಕಾರಿ ಬಿ. ಕಲ್ಲೇಶ ಅವರಿಗೆ ಸಂಬಂಧಿಸಿದ ಒಂಬತ್ತು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
ಕೊಪ್ಪಳ, ಧಾರವಾಡ, ರಾಯಚೂರು, ಹಾವೇರಿ, ಗದಗ ಹಾಗೂ ವಿಜಯನಗರ ಜಿಲ್ಲೆಗಳ 30ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು ಬೆಳಗಿನ ಜಾವದಿಂದ ರಾತ್ರಿ ತನಕ ಪರಿಶೀಲನೆ ನಡೆಸಿದರು. ಕಲ್ಲೇಶ ಅವರ ಮನೆ, ಭಾಗ್ಯನಗರದಲ್ಲಿರುವ ನವಚೇತನ ಶಾಲೆ, ಕಿಮ್ಸ್ ಕಚೇರಿ ಹಾಗೂ ಸಂಬಂಧಿಕರ ಮನೆಯಲ್ಲಿ ದಾಳಿ ನಡೆದಿದೆ.
ಈ ವೇಳೆ ₹28.24 ಲಕ್ಷ ಮೌಲ್ಯದ ಏಳು ನಿವೇಶನಗಳು, ಕನಿಷ್ಠ ₹10 ಕೋಟಿ ಬೆಲೆಬಾಳುವ ಮನೆ, ಶಾಲೆ ಮತ್ತು ಹಾಸ್ಟೆಲ್ ಕಟ್ಟಡ, ₹3.23 ಕೋಟಿ ಮೌಲ್ಯದ 31.25 ಎಕರೆ ಕೃಷಿ ಭೂಮಿ, ಮನೆಯಲ್ಲಿ ₹37 ಲಕ್ಷ ನಗದು, 1104 ಗ್ರಾಂ ಚಿನ್ನಾಭರಣ, ಮೂರೂವರೆ ಕೆ.ಜಿ. ಬೆಳ್ಳಿ ಪತ್ತೆಯಾಗಿದೆ. ಬೆಳ್ಳಿ ಹಾಗೂ ಬಂಗಾರದ ಮೌಲ್ಯವೇ ₹1.13 ಕೋಟಿ ಎಂದು ಅಂದಾಜಿಸಲಾಗಿದೆ.
₹38.60 ಲಕ್ಷ ಬೆಲೆಬಾಳುವ ಒಂದು ಕಾರು, ಒಂದು ಬೈಕ್, ಬ್ಯಾಂಕ್ ಖಾತೆಯಲ್ಲಿ ನಿಶ್ಚಿತ ಠೇವಣೆ ₹ 61 ಲಕ್ಷ ನಗದು ಎಲ್ಲವೂ ಸೇರಿ ₹10.46 ಕೋಟಿಯಷ್ಟು ಆಸ್ತಿಯ ಮಾಹಿತಿ ಲಭ್ಯವಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ತಪಾಸಣಾ ಕಾರ್ಯ ಮುಗಿಸಿದ ಬಳಿಕ ಇಲ್ಲಿನ ಲೋಕಾಯಕ್ತ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.