ADVERTISEMENT

ಕೊಪ್ಪಳ: ದಾಳಿ ಬೆನ್ನಲ್ಲೇ ಲೋಕಾಯುಕ್ತ ಡಿವೈಎಸ್‌ಪಿ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:47 IST
Last Updated 19 ಸೆಪ್ಟೆಂಬರ್ 2025, 6:47 IST
ಡಾ. ಬಸವರಾಜ ಕ್ಯಾವಟರ್‌
ಡಾ. ಬಸವರಾಜ ಕ್ಯಾವಟರ್‌   

ಕೊಪ್ಪಳ: ಇಲ್ಲಿನ ನಗರಸಭೆಯಲ್ಲಿ ನಡೆದಿದೆ ಎನ್ನಲಾದ ಅಪಾರ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ಆಳಕ್ಕಿಳಿದು ತನಿಖೆ ನಡೆಸುತ್ತಿರುವಾಗಲೇ ಲೋಕಾಯುಕ್ತ ಡಿವೈಎಸ್‌ಪಿ ವಸಂತ ಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅವರಿಗೆ ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. 

ವಸಂತಕುಮಾರ ಆರು ತಿಂಗಳ ಹಿಂದೆಯಷ್ಟೇ ಕೊಪ್ಪಳಕ್ಕೆ ಬಂದಿದ್ದರು. ನಗರಸಭೆಯಲ್ಲಿ ಕೆಲ ಅಧಿಕಾರಿಗಳು ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಸಿದ ಮತ್ತು ಹಲವು ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಿದ ಆರೋಪ ಕೇಳಿಬಂದಿದ್ದರಿಂದ ವಸಂತಕುಮಾರ ನೇತೃತ್ವದಲ್ಲಿ ಲೋಕಾಯುಕ್ತ ಸಿಬ್ಬಂದಿ ಮಂಗಳವಾರ ಇಲ್ಲಿನ ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌ ಸಹೋದರ ಶಕೀಲ್‌ ಪಟೇಲ್‌, ಕಿರಿಯ ಎಂಜಿನಿಯರ್‌ ಸೋಮಲಿಂಗಪ್ಪ, ಆರ್‌.ಐ. ಉಜ್ವಲ್‌ ಹಾಗೂ ಗುತ್ತಿಗೆದಾರ ಪ್ರವೀಣ್ ಚಂದಾರಿ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿ ಅಪಾರ ಪ್ರಮಾಣದಲ್ಲಿ ದಾಖಲೆ ವಶಕ್ಕೆ ಪಡೆದಿದ್ದರು. 

ತನಿಖೆ ಹಾಗೂ ಅವಧಿ ಪೂರ್ಣಗೊಳ್ಳುವ ಮೊದಲೇ ವಸಂತ ಕುಮಾರ ಅವರನ್ನು ವರ್ಗಾವಣೆ ಮಾಡಿದ್ದರಿಂದ ಸಾಮಾಜಿಕ ‌ತಾಣಗಳಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ರಾಘವೇಂದ್ರ ಹಿಟ್ನಾಳ ಮತ್ತು ಸಂಸದ ರಾಜಶೇಖರ ಹಿಟ್ನಾಳ ಅವರ ಹಸ್ತಕ್ಷೇಪದಿಂದಲೇ ಈ ದಿಢೀರ್ ವರ್ಗಾವಣೆ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. 

ADVERTISEMENT

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಭ್ರಷ್ಟ ಸಿಂಡಿಕೇಟ್‌ಗೆ ಶಾಸಕರ ಆಶೀರ್ವಾದ ಇದೆ ಎಂದು ದೂರಿದ್ದಾರೆ.

'ಕೊಪ್ಪಳದಲ್ಲಿ ಆಡಳಿತ ವ್ಯವಸ್ಥೆ ಭ್ರಷ್ಟತೆಯ ಉತ್ತುಂಗಕ್ಕೆ ತಲುಪಿದೆ ಎಂಬುದನ್ನು ವಸಂತ ಕುಮಾರ ಅವರ ಏಕಾಏಕಿ ವರ್ಗಾವಣೆ ಸಾಬೀತುಪಡಿಸಿದೆ. ದಕ್ಷತೆ, ಅಭಿವೃದ್ಧಿ, ಪ್ರಾಮಾಣಿಕತೆ ಹಾಗೂ ಮೌಲ್ಯಗಳ ಬಗ್ಗೆ ಶಾಸಕರಿಗೆ ಕಿಂಚತ್ತಾದರೂ ಗೌರವ ಇದ್ದರೆ ಈ ಕೂಡಲೇ ವರ್ಗಾವಣೆ ಆದೇಶವನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಪತ್ರಿಕಾ ಹೇಳಿಕೆ ನೀಡಿದ್ದು ‘ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಯನ್ನೇ ದಿಢೀರ್ ಎತ್ತಂಗಡಿ ಮಾಡಿಸುವ ಮೂಲಕ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರು ತಮ್ಮ ಬೆಂಬಲಿಗರ ರಕ್ಷಣೆಗೆ ನಿಂತಿದ್ದಾರೆ. ಇದು ದುರಾಡಳಿತದ ಪರಾಮಾವಧಿಯಾಗಿದೆ. ಇದಕ್ಕೆ ಮುಂದಿನ ದಿ‌ನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಸಿ.ವಿ. ಚಂದ್ರಶೇಖರ್‌
ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಬಯಲಿಗೆ ಬಂದಿದ್ದು ಪರಿಶೀಲನೆ ಮಾಡುತ್ತಿದ್ದ ಅಧಿಕಾರಿಯನ್ನೇ ವರ್ಗಾವಣೆ ಮಾಡಿಸಿರುವ ಕೊಪ್ಪಳ ಶಾಸಕ ಸಂಸದರ ನಡೆ ಖಂಡನೀಯ.
ಡಾ.ಬಸವರಾಜ ಕ್ಯಾವಟರ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ
ಲೋಕಾಯುಕ್ತ ದಾಳಿಗೆ ಒಳಗಾದವರೆಲ್ಲರೂ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಹಿಂಬಾಲಕರು. ಡಿವೈಎಸ್‌ಪಿ ವರ್ಗಾವಣೆ ರದ್ದು ಮಾಡಿ ದಕ್ಷತೆಯ ಪರವಾಗಿದ್ದೇನೆ ಎಂದು ಅವರು ಸಾಬೀತು ಮಾಡಬೇಕು. ಇಲ್ಲವೇ ಭ್ರಷ್ಟತೆಯ ಪರವಾಗಿದ್ದೇನೆ ಎಂದು ಒಪ್ಪಿಕೊಳ್ಳಬೇಕು.
ಸಿ.ವಿ. ಚಂದ್ರಶೇಖರ್‌ ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.