ಯಲಬುರ್ಗಾ: ‘ಅಂಗನವಾಡಿ ಕೇಂದ್ರಗಳು ಮಕ್ಕಳ ಸ್ನೇಹಿಯಾಗಿದ್ದರೆ ಮಾತ್ರ ಅವುಗಳ ಕೆಲಸ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ’ ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು,‘ಕೇಂದ್ರ ಮಾದರಿಯಾಗಿದ್ದು, ಮಕ್ಕಳ ಶಿಸ್ತು ಹಾಗೂ ಸಮವಸ್ತ್ರಗಳು, ಗೋಡೆ ಬರಹ ಹಾಗೂ ಮಕ್ಕಳ ಲವಲವಿಕೆ ಖುಷಿ ಕೊಡುತ್ತಿದೆ. ಮಕ್ಕಳು ಹೆಚ್ಚು ಸಮಯವನ್ನು ಕೇಂದ್ರದಲ್ಲಿ ಕಳೆಯುವಂತೆ ಮಾಡಬೇಕಾದ ಜವಾಬ್ದಾರಿ ಕಾರ್ಯಕರ್ತೆಯರ ಮೇಲಿದೆ. ಮಕ್ಕಳ ರಕ್ಷಣೆಯಲ್ಲಿಯೂ ವಿಶೇಷ ಕಾಳಜಿ ಅವಶ್ಯಕ. ಈ ನಿಟ್ಟಿನಲ್ಲಿ ಹೆಚ್ಚು ಜಾಗರೂಕತೆ ವಹಿಸುವುದು ಮುಖ್ಯ’ ಎಂದರು.
ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಆಗದ ಹಾಗೆ ನೋಡಿಕೊಳ್ಳಬೇಕು. ಗರ್ಭಿಣಿಯ ಆರೈಕೆ ಬಗ್ಗೆ ಆಶಾ ಕಾರ್ಯಕರ್ತೆಯರು ಸರಿಯಾದ ರೀತಿಯಲ್ಲಿ ಸಲಹೆ ಸೂಚನೆಗಳನ್ನು ನೀಡುವುದು ಮುಖ್ಯ. ಬಾಲ ಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಿ ರಕ್ಷಿಸಲು ಹೆಚ್ಚು ಮುತುವರ್ಜಿ ತೋರಬೇಕು ಎಂದು ಸಲಹೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಮಾತನಾಡಿ,‘ಮಕ್ಕಳಿಗೆ ಸಂವಿಧಾನಾತ್ಮಕವಾಗಿ ಸಿಗುವ ಹಕ್ಕು ದೊರೆಯುವಂತೆ ಮಾಡುವುದು ಎಲ್ಲರ ಕರ್ತವ್ಯ. ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಬೇಕು’ ಎಂದರು.
ಮಕ್ಕಳ ಆಯೋಗದ ಸದಸ್ಯ ತಿಪ್ಪೇಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೆಕೊಪ್ಪ, ಆರೋಗ್ಯ ಇಲಾಖೆಯ ಡಾ.ಅಂಬರೀಶ್ ಹಾಗೂ ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.