ADVERTISEMENT

ಕೊಪ್ಪಳ: ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ

ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 14:09 IST
Last Updated 20 ಜುಲೈ 2020, 14:09 IST
ಕೊಪ್ಪಳದಲ್ಲಿ ಸೋಮವಾರ ಕೋವಿಡ್‌–19 ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯ ಬಳಿಯ ಕೃಷಿ ಇಲಾಖೆಯಿಂದ ಹತ್ತಿಯಲ್ಲಿ ಥಿಂಕ್‌ಬೋಲ್‌ವರ್ಮ್ ಹುಳುವಿನ ಬಾಧೆ ಹಾಗೂ ಭತ್ತದಲ್ಲಿ ಸೈನಿಕ ಹುಳುವಿನ ಬಾಧೆ ನಿಯಂತ್ರಣ ಕ್ರಮಗಳ ಕುರಿತು ಕರಪತ್ರವನ್ನು ಸಚಿವ ಬಿ.ಸಿ ಪಾಟೀಲ್‌ ಬಿಡುಗಡೆ ಮಾಡಿದರು
ಕೊಪ್ಪಳದಲ್ಲಿ ಸೋಮವಾರ ಕೋವಿಡ್‌–19 ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯ ಬಳಿಯ ಕೃಷಿ ಇಲಾಖೆಯಿಂದ ಹತ್ತಿಯಲ್ಲಿ ಥಿಂಕ್‌ಬೋಲ್‌ವರ್ಮ್ ಹುಳುವಿನ ಬಾಧೆ ಹಾಗೂ ಭತ್ತದಲ್ಲಿ ಸೈನಿಕ ಹುಳುವಿನ ಬಾಧೆ ನಿಯಂತ್ರಣ ಕ್ರಮಗಳ ಕುರಿತು ಕರಪತ್ರವನ್ನು ಸಚಿವ ಬಿ.ಸಿ ಪಾಟೀಲ್‌ ಬಿಡುಗಡೆ ಮಾಡಿದರು   

ಕೊಪ್ಪಳ: ಅಂತರ್ ‌ಜಿಲ್ಲಾ ಓಡಾಟದಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಜಿಲ್ಲೆಗೆ ಬರುವವರ ಕಡ್ಡಾಯ ತಪಾಸಣೆ ನಂತರವೇ ಜಿಲ್ಲೆಗೆ ಪ್ರವೇಶ ನೀಡಲು ಕ್ರಮ ಕೈಗೊಳ್ಳಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಎಸ್ಪಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ನಡೆದ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಲ್ಲಿ ಅಂತರ್‌ ಜಿಲ್ಲಾ, ರಾಜ್ಯ ಪ್ರಯಾಣ ಮಾಡಿದವರ ಪ್ರಮಾಣವೇ ಹೆಚ್ಚಿದೆ ಎಂದರು.

ಜಿಲ್ಲೆಗೆ ಬರುವವರನ್ನು ಥರ್ಮಲ್ ಸ್ಕ್ಯಾನರ್ ಬಳಸಿ, ತಪಾಸಣೆ ನಡೆಸಬೇಕು. ಗ್ರಾಮೀಣ ಭಾಗಗಳಲ್ಲಿ ಜನರು ಗುಂಪು, ಗುಂಪಾಗಿ ಸೇರುವುದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ಬೀಟ್‌ಗಳನ್ನು ಹೆಚ್ಚಿಸಿ, ಮೈಕ್‌ಗಳ ಮೂಲಕ ಗ್ರಾಮೀಣರಲ್ಲಿ ತಿಳಿವಳಿಕೆ ಮೂಡಿಸಿ, ಜನರು ಗುಂಪು ಸೇರದಂತೆ ನೋಡಿಕೊಳ್ಳಿ ಎಂದರು.

ADVERTISEMENT

ರಾಜ್ಯ ಸರ್ಕಾರವು ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ಹೋಮ್ ಐಸೋಲೇಷನ್ ಮಾಡಲು ನಿರ್ದೇಶನ ನೀಡಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಪ್ರತ್ಯೇಕ ಮಲಗುವ ಕೋಣೆ, ಸ್ನಾನಗೃಹ ಮುಂತಾದವುಗಳ ಕೊರತೆ ಇರುತ್ತದೆ. ಅಂತವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ. ಎಲ್ಲ ರೀತಿಯ ಪ್ರತ್ಯೇಕ ಸೌಲಭ್ಯವಿದ್ದಲ್ಲಿ ಮಾತ್ರ ಸೋಂಕಿತರು ಬಯಸಿದಲ್ಲಿ ಅವರ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಕ್ವಾರಂಟೈನ್ ಸೀಲ್ ಇರುವ ವ್ಯಕ್ತಿ ನಿಯಮ ಮೀರಿ ಮನೆಯ ಹೊರಗೆ ಬಂದಲ್ಲಿ ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.

ಕೋವಿಡ್ ಕೇರ್ ಕೇಂದ್ರಗಳಲ್ಲಿರುವವರಿಗೆ ಉತ್ತಮ ಆಹಾರ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಕ್ರಮ ಕೈಗೊಂಡು ಆರೋಗ್ಯಕರ ಆಹಾರ ನೀಡಿ. ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿರುವ ರೋಗಿಗಳಿಗೆ ಉತ್ತಮ ಆಹಾರ ಮತ್ತು ಮಾನಸಿಕ ಬೆಂಬಲದ ಅಗತ್ಯವಿರುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ಆಹಾರ ಒದಗಿಸಿ. ಪ್ರತಿದಿನ ಕೇಂದ್ರಗಳ ಸ್ಯಾನಿಟೈಜೇಷನ್, ಸ್ನಾನಗೃಹ, ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಿ ಎಂದರು.

ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಂಬುಲನ್ಸ್ ಇರಬೇಕು. ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಅಂಬುಲನ್ಸ್ ಮೂಲಕವೇ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು. ಗಂಗಾವತಿಯಲ್ಲಿ ಸೋಂಕಿತ ಮಹಿಳೆಯೊಬ್ಬರು ಸಮರ್ಪಕ ಮಾಹಿತಿ ಕೊರತೆಯಿಂದ ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದು, ಮಾಧ್ಯಮದಲ್ಲಿ ವರದಿಯಾಗಿತ್ತು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಿ. ಕೋವಿಡ್ ಕುರಿತು ಜಿಲ್ಲೆಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಬಂದಿರುವ ಕರೆಗಳು, ನೀಡಿದ ಮಾಹಿತಿಯ ವಿವರವನ್ನು ಸಲ್ಲಿಸಿ. ಪ್ರಸ್ತುತ ಕರಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದರು.

ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್, ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಸಿಇಓ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.