ADVERTISEMENT

ಹನುಮಸಾಗರ | ಬಿಸಿಲು ನಾಡಿನಲ್ಲಿ ಹಸಿರು ಕಾನನ

ವಿದ್ಯಾರ್ಥಿಗಳಿಗೆ ಪರಿಸರ ಪಾಠ ಮಾಡುವ ದೇವೇಂದ್ರಪ್ಪ ಬಳೂಟಗಿ

ಕಿಶನರಾವ್‌ ಕುಲಕರ್ಣಿ
Published 5 ಜೂನ್ 2020, 4:22 IST
Last Updated 5 ಜೂನ್ 2020, 4:22 IST
ಹನುಮಸಾಗರ ಸಮೀಪದ ಮದಲಗಟ್ಟಿ ಗ್ರಾಮದಲ್ಲಿ ದೇವೇಂದ್ರಪ್ಪ ಬಳೂಟಗಿ ಅವರು ಬೆಳೆಸಿರುವ ಸಮೃದ್ಧಿ ಅರಣ್ಯದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಪಾಠ ಮಾಡುತ್ತಿರುವುದು  (ಸಂಗ್ರಹ ಚಿತ್ರ)
ಹನುಮಸಾಗರ ಸಮೀಪದ ಮದಲಗಟ್ಟಿ ಗ್ರಾಮದಲ್ಲಿ ದೇವೇಂದ್ರಪ್ಪ ಬಳೂಟಗಿ ಅವರು ಬೆಳೆಸಿರುವ ಸಮೃದ್ಧಿ ಅರಣ್ಯದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಪಾಠ ಮಾಡುತ್ತಿರುವುದು  (ಸಂಗ್ರಹ ಚಿತ್ರ)   

ಹನುಮಸಾಗರ (ಕೊಪ್ಪಳ ಜಿಲ್ಲೆ): ದೇವೇಂದ್ರಪ್ಪ ಬಳೂಟಗಿಯವರು ಸದಾ ಶುಭ್ರ ಧೋತಿ, ನಿಲುವಂಗಿ ತೊಡುವ ಸರಳ ಸಜ್ಜನಿಕೆಯ ವ್ಯಕ್ತಿ. ಜೊತೆಗೆ ಮಣ್ಣಿನ ವಾಸನೆ, ಅದರ ಗುಣಧರ್ಮ ಬಲ್ಲವರು. ಗಿಡ, ಮಣ್ಣು, ನೀರಿನೊಂದಿಗೆ ನಿತ್ಯ ಒಡನಾಟ ಹೊಂದಿದ್ದಾರೆ.

ಇಲ್ಲಿನ ಮದಲಗಟ್ಟಿ ಮತ್ತು ಮಂಡಲಮರಿ ಗ್ರಾಮದಲ್ಲಿ ಸುಮಾರು 30 ಎಕರೆ ವಿಶಾಲವಾದ ತೋಟವನ್ನು ಇವರು ಮಾಡಿಕೊಂಡಿದ್ದು, ಇಲ್ಲಿ ಪಪ್ಪಾಯ, ಮಾವು, ದಾಳಿಂಬೆ, ಶ್ರೀಗಂಧ ಸೇರಿದಂತೆ ಹಲವು ಬಗೆಯ ಸಸಿ– ಮರಗಳನ್ನು ಪೋಷಿಸುತ್ತಿದ್ದಾರೆ.

ಇವರ ತೋಟಕ್ಕೆ ಬರುವ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಬಳೂಟಗಿಯವರು ಯಾವುದೇ ಬೇಸರವಿಲ್ಲದೆ ಮಕ್ಕಳನ್ನು ತೋಟ ಸುತ್ತಾಡಿಸಿ ಪರಿಸರ ಹಾಗೂ ಅರಣ್ಯ ಕೃಷಿಯ ಬಗ್ಗೆ ತಿಳಿವಳಿಕೆ ನೀಡುತ್ತಾರೆ.

ADVERTISEMENT

ಇವರ ಕೃಷಿ ಜಾಡನ್ನೇ ಹಿಡಿದಿರುವ ಅನೇಕ ಯುವ ರೈತರು ಅಲ್ಲಲ್ಲಿ ಅರಣ್ಯ ಕೃಷಿ ಮಾಡುತ್ತಿದ್ದ ಕಾರಣ ಈಗ ಕುಷ್ಟಗಿ ತಾಲ್ಲೂಕಿನಲ್ಲಿ ಸುಮಾರು ಸಾವಿರ ಎಕರೆಗೂ ಅರಣ್ಯ ಕೃಷಿ ವಿಸ್ತಾರವಾಗಿದೆ.

ಪ‍ರಿಸರದ ಮೇಲಿನ ಇವರ ಆಸಕ್ತಿಯಿಂದಾಗಿ ಇಡೀ 30 ಎಕರೆ ಪ್ರದೇಶವು ಹಚ್ಚ ಹಸಿರಾಗಿದೆ. ಈಚೆಗೆ ಹನುಮಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್‌ ಅಡಿಯಲ್ಲಿ ಬಳೂಟಗಿ ಅವರೊಂದಿಗೆ ತೋಟದಲ್ಲಿಯೇ ಪರಿಸರ ಸಂವಾದ ಕಾರ್ಯಕ್ರಮ ನಡೆಸಿದ್ದರು.

ದೇವೇಂದ್ರಪ್ಪ ಬಳೂಟಗಿ ಅವರು, ತೋಟಕ್ಕೆ ಬರುವವರಿಗೆ ಅರಣ್ಯ ಕೃಷಿಯ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಾರೆ. ಕೃಷಿ ಇಲಾಖೆ, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಶೋಧಕರು, ರೈತರು, ರೈತ ಮಹಿಳೆಯರು... ಹೀಗೆ ಇಲ್ಲಿಗೆ ಬರುವವರ ಪಟ್ಟಿ ಬೆಳೆಯುತ್ತದೆ. ಅಂದಹಾಗೆ ಪರಿಸರದ ರಕ್ಷಣೆ ಜತೆ ಜತೆಗೆ ವಾಣಿಜ್ಯ ಗುರಿಯೂ ಈ ಅರಣ್ಯ ಕೃಷಿಯ ಹಿಂದಿದೆ.

ಇವರ ತೋಟದ ಎತ್ತರ ಪ್ರದೇಶದಲ್ಲಿ ನಿಂತು ನೋಟ ಹರಿಸಿದರೆ ತೇಗ, ಪಪ್ಪಾಯ, ಮಾವು, ದಾಳಿಂಬೆ, ಶ್ರೀಗಂಧ, ಹುಣಸೆ, ತೆಂಗು, ಬಿದಿರು, ಪೇರಲ, ಮೋಸಂಬಿ, ಬೇವು, ರಕ್ತಚಂದನ ಕಣ್ಣಿಗೆ ಹಬ್ಬ ತರುತ್ತವೆ.

ಹಚ್ಚಹಸಿರಿನ ಮಧ್ಯೆ ಪಕ್ಷಿಗಳ ಕಲರವ, ಇಲಿ, ಹಾವು, ಮುಂಗುಸಿಗಳ ಜೀವವೈವಿಧ್ಯ ದೊಡ್ಡ ಬಳಗವೇ ಇಲ್ಲಿದೆ.

ಕಡು ಬೇಸಿಗೆಯಲ್ಲೂ ಇಲ್ಲಿ ಹಚ್ಚಹಸಿರಿನ ವಾತಾವರಣ ಇರುತ್ತದೆ. ಮಳೆಗಾಲದಲ್ಲಿ ಎಷ್ಟೇ ಮಳೆ ಬಂದರೂ ನೀರು ಮಾತ್ರ ಜಪ್ಪಯ್ಯ ಎಂದರೂ ಜಮೀನು ಬಿಟ್ಟು ಹೊರ ಹೋಗುವುದಿಲ್ಲ. ಹಳ್ಳದಗುಂಟ ಬರುವ ನೀರನ್ನು ಹಿಡಿದಿಟ್ಟುಕೊಳ್ಳುವ ಬೃಹತ್ ಕೃಷಿ ಹೊಂಡಗಳೂ ಇಲ್ಲಿವೆ.

ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಬೆಳೆಯಲ್ಲಿ ವೈವಿಧ್ಯ ಕಾಪಾಡಿಕೊಳ್ಳಲಾಗಿದೆ. ಪರಿಸರಕ್ಕೆ ಪೂರಕವಾಗಿ ಒಂದಕ್ಕೊಂದು ಹೊಂದಾಣಿಕೆಯಿಂದ ಬೆಳೆಯಬಹುದಾದ ಗಿಡಗಳು, ಕಡಿಮೆ ಖರ್ಚಿನ ಬೇಸಾಯ, ಕಡಿಮೆ ನೀರಿದ್ದರೂ ಸಹಜ ಕೃಷಿಗೆ ಹೊಂದುವ ಹಣ್ಣಿನ ಬೆಳೆಗಳು, ಕಾಡುಜಾತಿ ಗಿಡಗಳ ಸಂಗಮ ಇಲ್ಲಿದೆ.

ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದರೂ ಹೆಚ್ಚು ಕಡಿಮೆ ಸಹಜ ಕೃಷಿಯೇ ಇದಾಗಿದೆ. ಈಗಾಗಲೇ ಮಾವು, ಹುಣಸೆ ಫಲ ನೀಡತೊಡಗಿವೆ. ಹತ್ತು ವರ್ಷಗಳ ಹಿಂದೆ ನಾಟಿ ಮಾಡಿದ ಶ್ರೀಗಂಧದ ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಪ್ರತಿವರ್ಷ ಅವುಗಳಿಂದ ಉದುರುವ ಎಲೆಯಿಂದ ಭೂಮಿಯಲ್ಲಿನ ಫಲವತ್ತತೆ ಹೆಚ್ಚುತ್ತಿದೆ.

ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಅರಣ್ಯ ಬೆಳೆಸುವುದರ ಜತೆಗೆ ಅದರಿಂದ ಸಾಕಷ್ಟು ಆದಾಯ ಪಡೆಯುವ ದಾರಿಯನ್ನು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.