
ಕೊಪ್ಪಳ: ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಹಾಗೂ ನಿಯಮಬಾಹಿರವಾಗಿ ಕೆಲಸ ಮಾಡುತ್ತಿರುವ ಕುರಿತು ದೂರು ಬಂದ ಬೆನ್ನಲ್ಲೇ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
‘ಗಣಿ ಇಲಾಖೆಯ ಕೊಪ್ಪಳ ಜಿಲ್ಲೆಯ ಅಧಿಕಾರಿಗಳ ನಡೆಯಿಂದ ರಾಜ್ಯ ಸರ್ಕಾರಕ್ಕೆ ರಾಜಧನ ನಷ್ಟವಾಗುತ್ತಿದೆ. ಆದ್ದರಿಂದ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಎಸ್. ಕವಲೂರು ಸೇರಿದಂತೆ 10 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರೂ ಆದ ಶಾಸಕ ಬಸವರಾಜ ರಾಯರಡ್ಡಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೂ ವ್ಯಾಪಕ ಚರ್ಚೆಯಾಗುತ್ತಿದೆ.
ಜಿಲ್ಲೆಯಲ್ಲಿ ಸುಮಾರು 85 ಕಿ.ಮೀ. ಗೂ ಹೆಚ್ಚು ತುಂಗಭದ್ರಾ ನದಿಯ ತಟವಿದ್ದು ನೈಸರ್ಗಿಕವಾಗಿ ಸಾಕಷ್ಟು ಮಣ್ಣು ಶೇಖರಣೆಯಾಗುತ್ತದೆ. ಇದು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ರಾಯರಡ್ಡಿ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಮತ್ತು ಗಣಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಕೂಡ ಒಂದಷ್ಟು ದಾಖಲೆಗಳನ್ನು ಕಳುಹಿಸಿದ್ದಾರೆ.
ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ‘ರಾಯರಡ್ಡಿ ಅವರ ಪತ್ರದ ಬಳಿಕ ತನಿಖೆ ನಡೆಯುತ್ತಿದೆ. ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದ ಬೆಣ್ಣೆಕೆರೆಯ ಸರ್ವೆ ಸಂಖ್ಯೆ 277ರ 9.07 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ವಿಚಾರವಾಗಿ ವಿಧಿಸಲಾಗಿದ್ದ ರಾಜಧನ ವಿಚಾರದಲ್ಲಿ ತಪ್ಪು ಗ್ರಹಿಕೆಯಾಗಿದೆ. ಇದು ಮನವರಿಕೆಯಾದ ಬಳಿಕ ಆದೇಶ ವಾಪಸ್ ಪಡೆಯಲಾಗಿದೆ’ ಎಂದು ಸ್ಪಷ್ಟಪಡಿಸಿದರು.
‘ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಣಿ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಅಗತ್ಯ ಸಂದರ್ಭದಲ್ಲಿ ಪೊಲೀಸರು ಕೂಡ ಅವರಿಗೆ ರಕ್ಷಣೆ ಕೊಡುತ್ತಿದ್ದಾರೆ. ಅಕ್ರಮ ತಡೆಯುವುದು ಗಣಿ ಇಲಾಖೆಯ ಅಧಿಕಾರಿಗಳದ್ದು ಪ್ರಮುಖ ಕೆಲಸವಿರುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದು ಅವರೂ ಅಧಿಕಾರಿಗಳ ರಕ್ಷಣೆಗೆ ಕ್ರಮ ವಹಿಸಿದ್ದಾರೆ’ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ ಬಗ್ಗೆ ದೂರುಗಳು ಬಂದಾಗಲೆಲ್ಲ ಕ್ರಮ ಕೈಗೊಂಡು ಎಫ್‌ಐಆರ್ ಹಾಕಿದ್ದೇವೆ. ದಂಡವನ್ನೂ ವಿಧಿಸಿದ್ದೇವೆ. ಅಕ್ರಮ ತಡೆಯಲು ಕಾರ್ಯಪಡೆ ರಚಿಸಲಾಗಿದೆಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಮರಳು ಅಕ್ರಮ ವಿಚಾರದ ಕುರಿತು ಬಸವರಾಜ ರಾಯರಡ್ಡಿ ಅವರು ಪತ್ರ ಬರೆದಿರುವ ವಿಚಾರ ಗೊತ್ತಿಲ್ಲ. ಅಧಿಕಾರಿಗಳು ಪ್ರತಿಕ್ರಿಯೆ ಬಗ್ಗೆಯೂ ತಿಳಿದಿಲ್ಲರಾಘವೇಂದ್ರ ಹಿಟ್ನಾಳ ಶಾಸಕ
ತಾಂತ್ರಿಕ ಬಿಡ್‌ಗೂ ಮೊದಲೇ ಹಣಕಾಸು ಬಿಡ್
ಬಹಿರಂಗ ಕೊಪ್ಪಳ: ಜಿಲ್ಲೆಯಲ್ಲಿ ಅಧಿಕೃತವಾಗಿಯೇ ಮರಳು ಪಾಯಿಂಟ್‌ಗಳನ್ನು ಗುರುತಿಸಲು ಕರೆಯಲಾಗಿದ್ದ ಟೆಂಡರ್ ಪೂರ್ಣಗೊಳ್ಳುವ ಮೊದಲೇ ಹಣಕಾಸು ಬಿಡ್ ಬಹಿರಂಗವಾಗಿರುವ ಅಂಶ ಗೊತ್ತಾಗಿದೆ. ತಾಲ್ಲೂಕಿನ ಹಿರೇಹಳ್ಳ ಸೇರಿದಂತೆ ಅನೇಕ ಕಡೆ ವ್ಯಾಪಕವಾಗಿ ಮರಳು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಆದ್ದರಿಂದ ಜಿಲ್ಲೆಯಾದ್ಯಂತ ಮರಳು ಪಾಯಿಂಟ್‌ಗಳನ್ನು ಅಧಿಕೃತಗೊಳಿಸಲು ಹಿಂದಿನ ಜಿಲ್ಲಾಧಿಕಾರಿಯಿದ್ದಾಗ ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಬಿಡ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಆರ್ಥಿಕ ಬಿಡ್ ಬಹಿರಂಗವಾಗಿದ್ದರಿಂದ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಪಡಿಸಿ ಈಗ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ.
ಅನಾಮಧೇಯ ಪತ್ರಕ್ಕೆ ಹೊಣೆಯಿಲ್ಲ
ಕೊಪ್ಪಳ: ಬಸವರಾಜ ರಾಯರಡ್ಡಿ ಅವರ ಪತ್ರದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ದಿನವೇ ಸಾಮಾಜಿಕ ತಾಣಗಳಲ್ಲಿ ರಾಯರಡ್ಡಿ ಅವರಿಗೆ 20 ಪ್ರಶ್ನೆಗಳನ್ನು ಕೇಳಿದ ಅನಾಮಧೇಯ ಪತ್ರ ಹರಿದಾಡಿತ್ತು. ಅನಾಮಧೇಯ ಪತ್ರಕ್ಕೆ ಉತ್ತರ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಪಡಿಸಿದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪತ್ರಕ್ಕೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ. ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಎಸ್. ಕವಲೂರು ಪತ್ರದ ಕುರಿತು ಸ್ಪಷ್ಟೀಕರಣ ನೀಡಿದ್ದು ‘ಸಹಿ ಇಲ್ಲದ ಪತ್ರಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಈ ವಿಷಯವನ್ನು ಜಿಲ್ಲಾ ಕಚೇರಿಯಿಂದ ಹೊರಡಿಸಿರುವುದಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.