ಗಂಗಾವತಿ: ತಾಲ್ಲೂಕಿನ ಹೇಮಗುಡ್ಡ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6, 7, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ ಹತ್ತನೇ ತರಗತಿಯ ಐವರು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ವಸತಿ ನಿಲಯದ ಪ್ರಾಂಶುಪಾಲರು ಮಂಗಳವಾರ ತೀರ್ಮಾನಿಸಿದ್ದಾರೆ.
ಹೇಮಗುಡ್ಡ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 1-10ನೇ ತರಗತಿವರೆಗೆ 246 ವಿದ್ಯಾರ್ಥಿಗಳಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಬಟ್ಟೆ ಒಗೆಸುವುದು, ನಿಲಯ ಕೊಠಡಿ ಸ್ವಚ್ಛತೆ ಮಾಡಿಸುವುದು, ತರಗತಿಯಲ್ಲಿ ಶಿಕ್ಷಕರು ನೀಡಿದ ಹೋಂ ವರ್ಕ್ ಮಾಡಲು ಹೇಳುತ್ತಿದ್ದರು ಎನ್ನಲಾಗಿದೆ. ಈ ವಿಷಯ ಶಿಕ್ಷಕರಿಗೆ ಪಾಲಕರಿಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಲಾಗುತ್ತಿತ್ತು. ಅವರ ವರ್ತನೆಗೆ ಬೇಸತ್ತು, ಕಿರಿಯ ವಿದ್ಯಾರ್ಥಿಗಳು ಪಾಲಕರಿಗೆ ತಿಳಿಸಿದ್ದಾರೆ. ಪಾಲಕರು ವಸತಿ ನಿಲಯಕ್ಕೆ ಭೇಟಿ ನೀಡಿ, ಹತ್ತನೇ ತರಗತಿ ವಿದ್ಯಾರ್ಥಿಗಳ ವಿರುದ್ಧ ಪ್ರಾಂಶುಪಾಲರಿಗೆ ದೂರು ನೀಡಿ, ಗಲಾಟೆ ಮಾಡಿದ್ದಾರೆ.
ಈ ವೇಳೆ ಪ್ರಾಂಶುಪಾಲರು ಕಿರಿಯ ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ. 10ನೇ ತರಗತಿಯ ಕೆಲ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ ವಿಷಯ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿಚಾರಿಸಿದಾಗ ರ‍್ಯಾಗಿಂಗ್ ನಡೆದಿರುವುದು ಖಚಿತವಾಗಿದೆ.
‘ರ‍್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳ ಪಾಲಕರನ್ನು ವಸತಿ ನಿಲಯಕ್ಕೆ ಕರೆಸಿ, ಮಕ್ಕಳಿಂದ ಆದ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿ, ಅನುಚಿತ ವರ್ತನೆ ಘಟನೆಗಳು ನಡೆಯದಂತೆ ತಡೆಯಲು ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋಗಿ, ನೇರವಾಗಿ ಪರೀಕ್ಷೆಗಳಿಗೆ ಕರೆತರುವಂತೆ ಸೂಚಿಸಲಾಗಿದೆ’ ಎಂದು ಶಾಲೆಯ ಪ್ರಾಂಶುಪಾಲ ರವಿಕುಮಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.