ADVERTISEMENT

ಕೊಪ್ಪಳ: ಕಾಣೆಯಾಗಿದ್ದ ಬಾಲಕಿಯ ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 18:03 IST
Last Updated 21 ಏಪ್ರಿಲ್ 2024, 18:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕಿ ಅನುಶ್ರೀ ಮಡಿವಾಳರ (7) ಭಾನುವಾರ ಶವವಾಗಿ ಪತ್ತೆಯಾಗಿದ್ದಾಳೆ.

ಗ್ರಾಮದ 7ನೇ ವಾರ್ಡ್‌ನಲ್ಲಿ ವಾಸವಾಗಿದ್ದ ರಾಘವೇಂದ್ರ ಮಡಿವಾಳರ ಅವರ ಪುತ್ರಿ ಅನುಶ್ರೀ ಏ. 19ರಂದು ಮಧ್ಯಾಹ್ನ ಕಾಣೆಯಾಗಿದ್ದಳು. ಈ ಕುರಿತು ಕೊಪ್ಪಳ ಮಹಿಳಾ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿತ್ತು. ಭಾನುವಾರ ಮನೆ ಹತ್ತಿರದ ಪಾಳು ಜಾಗದಲ್ಲಿ ಚೀಲದಲ್ಲಿ ಶವವಾಗಿ ಆಕೆಯ ದೇಹ ಪತ್ತೆಯಾಗಿದೆ.

ADVERTISEMENT

ಪಾಳು ಜಾಗದಲ್ಲಿ ಚೀಲದಿಂದ ವಾಸನೆ ಬರುತ್ತಿರುವುದನ್ನು ಗ್ರಹಿಸಿದ ಜನರಿಗೆ ಬಾಲಕಿ ಶವ ಕಂಡಿದೆ. ಬಾಲಕಿ ಶವ ಪತ್ತೆಯಾಗಿರುವ ಸ್ಥಳ ಕಿನ್ನಾಳದ ಗ್ರಾಮದ ಮಧ್ಯದಲ್ಲಿದೆ. ಅದರ ಸುತ್ತಲೂ ಮನೆಗಳಿವೆ. ಇಂಥ ಸ್ಥಳದಲ್ಲಿ ಶವ ಕಂಡಿದ್ದು ಜನರಲ್ಲಿ ಆಘಾತ ಮೂಡಿಸಿದೆ.

ವ್ಯಾಪಕ ಪ್ರಚಾರ: ಬಾಲಕಿ ಪತ್ತೆಗಾಗಿ ಕಿನ್ನಾಳ ಪಂಚಾಯಿತಿಯ ವಾಹನಗಳ ಮೈಕ್‌ನಲ್ಲಿ ಪ್ರಚಾರ ಮಾಡಲಾಗಿತ್ತು. ಗ್ರಾಮದಲ್ಲಿರುವ ಕೆಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿತ್ತು.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಡಿವೈಎಸ್‌ಪಿ ಮುತ್ತಣ್ಣ ಸವರಗೋಳ, ಹೆಚ್ಚುವರಿ ಎಸ್‌.ಪಿ. ಹೇಮಂತಕುಮಾರ್‌, ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ. ಸೇರಿದಂತೆ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಅನುಶ್ರೀಯನ್ನು ಕೊಲೆ ಮಾಡಿ ಚೀಲದಲ್ಲಿ ತುಂಬಿಡಲಾಗಿದೆ. ಪಾಳು ಮನೆಯೊಂದರಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಳ್ಳಾರಿಯಿಂದ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ತಡರಾತ್ರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಎಸ್‌.ಪಿ. ಯಶೋಧಾ ’ಕೆಲವರ ಮೇಲೆ ಸಂಶಯವಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಘಟನೆಗೆ ಏನು ಕಾರಣ ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.