ಗಂಗಾವತಿ: ಭತ್ತದ ಬೆಳೆಗಾಗಿ ಏಪ್ರಿಲ್ 20ರವರೆಗೆ ತುಂಗಾಭದ್ರ ಎಡದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ, ಕಾರ್ಮಿಕ, ವರ್ತಕರ ಸೇರಿ ಇತರ ಕನ್ನಡಪರ ಸಂಘಟನೆಗಳು ಮಂಗಳವಾರ ಕರೆನೀಡಿದ್ದ ಗಂಗಾವತಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಅಂಬೇಡ್ಕರ್, ಪಂಪಾನಗರ, ಬಸವಣ್ಣ, ಗಾಂಧಿ, ಮಹಾವೀರ, ಸಿಬಿಎಸ್ ವೃತ್ತದ ಬಳಿಯ ಎಲ್ಲ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 11 ಗಂಟೆವರೆಗೆ ಶೇ 30ರಷ್ಟು ಬಂದ್ ಆಗಿದ್ದವು. ಎಂದಿನಂತೆ ಬಸ್, ಆಟೊ, ಇತರೆ ವಾಹನ ಹಾಗೂ ಸಾರ್ವಜನಿಕರ ಓಡಾಟ ಸಹಜವಾಗಿತ್ತು. ಜನರು ತಮ್ಮ ಕೆಲಸ ಕಾರ್ಯಗಳಿಗೆ ಹೋಗುವುದು, ವಿದ್ಯಾರ್ಥಿಗಳು ಕಾಲೇಜುಗಳತ್ತ ಹೋಗುವುದು ಕಂಡು ಬಂದಿತು. ಬಸ್‌ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಲ್ಲಿ ಬೆಳಿಗ್ಗೆಯಿಂದಲೇ ಜನ ಸಂಚಾರ ನಿರಂತರವಾಗಿತ್ತು.
ಸಿಬಿಎಸ್ ವೃತ್ತದಲ್ಲಿ ಪ್ರತಿಭಟನೆ: ರೈತ, ಕಾರ್ಮಿಕ,ಕಟ್ಟಡ ಕಾರ್ಮಿಕ, ವರ್ತಕರು ಸೇರಿ ಕನ್ನಡಪರ ಸಂಘಟನೆಗಳು ಸಿಬಿಎಸ್ ವೃತ್ತದ ಸುತ್ತ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಕೊಪ್ಪಳ, ಕನಕಗಿರಿ, ರಾಯಚೂರು, ಗಂಗಾವತಿ ನಗರದ ಒಳಗ ತೆರಳು ರಸ್ತೆಗಳಲ್ಲಿ ಕೆಲ ಹೊತ್ತು ಸ್ವಲ್ಪಮಟ್ಟಿಗೆ ಸಂಚಾರ ದಟ್ಟಣೆ ಉಂಟಾಯಿತು. ಕೂಡಲೇ ಸಂಚಾರ ಮತ್ತು ನಗರ ಪೊಲೀಸರು ದಟ್ಟಣೆ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಂತರ ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ‘ರೈತರ ಜೀವನಾಡಿ ತುಂಗಾಭದ್ರ ನೀರು ರೈತರ ಬೆಳೆಗಳಿಗೆ, ಸಾರ್ವಜನಿಕರಿಗೆ ಕುಡಿಯಲು ನೀಡಬೇಕೆ ಹೊರತು ಕಾರ್ಖಾನೆಗಳ ವ್ಯಾಪಾರಕ್ಕಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಂಗಾಭದ್ರ ಎಡದಂಡೆ ಕಾಲುವೆಗೆ ಏಪ್ರಿಲ್ 20ರವರೆಗೆ ನೀರು ಬಿಡುವಂತೆ ಕೇಳುತ್ತಿರುವುದು ಒಬ್ಬರ ಸ್ವಾರ್ಥಕ್ಕಲ್ಲ. ರೈತರ ಹಿತಕ್ಕಾಗಿ ಮತ್ತು ಅವರ ಬೆಳೆಗಳ ರಕ್ಷಣೆಗಾಗಿ. ಅನ್ನದಾತರಿದ್ದರೆ ಮಾತ್ರ ನಮಗೆ ಊಟ. ಇಲ್ಲದಿದ್ದರೆ ಎಲ್ಲರೂ ಉಪವಾಸ. ಹಾಗಾಗಿ ಜಿಲ್ಲೆಯ ಸಚಿವರು, ಗಂಗಾವತಿ ಶಾಸಕರು ಕಾಲುವೆಗೆ ನೀರು ಬಿಡಿಸಿ, ರೈತರ ಬೆಳೆಗಳನ್ನು ಕಾಪಾಡುವಂತೆ ಒತ್ತಾಯಿಸಿದರು.
ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಅಧ್ಯಕ್ಷ ಶರಣೆಗೌಡ ಕೆಸರಹಟ್ಟಿ ಮಾತನಾಡಿ,ತುಂಗಾಭದ್ರ ಜಲಾಶಯಕ್ಕೆ ಈ ಬಾರಿ 400 ಟಿಎಂಸಿ ನೀರು ಹರಿದು ಬಂದರೂ ರೈತರ ಎರಡನೇ ಬೆಳೆಗೆ ನೀರು ನೀಡಲು ಆಗುತ್ತಿಲ್ಲ. ಈ ಹಿಂದಿನ ಸರ್ಕಾರ ಏ.30ರವರೆಗೆ ಕಾಲುವೆಗೆ ನೀರು ಹರಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ, ಕೊಪ್ಪಳ ಶಾಸಕರು ಹಣ ಪಡೆದು ಕಾರ್ಖಾನೆಗಳಿಗೆ ನೀರು ಬಿಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತುಂಗಾಭದ್ರ ಜಲಾಶಯ ನಿರ್ಮಾಣವಾಗಿ 75 ವರ್ಷಗಳಾಗಿದ್ದು, ಕ್ರಸ್ಟ್ ಗೇಟ್ ಮುರಿದು, ತಾತ್ಕಾಲಿಕ ಗೇಟ್ ಅಳವಡಿಸಿ ತಿಂಗಳುಗಳೇ ಕಳೆದರೂ ಹೊಸ ಗೇಟ್ ಅಳವಡಿಕೆ ಮಾಡಲು ಆಗಿಲ್ಲ. ಜಲಾಶಯಲ್ಲಿ 32 ಟಿಎಂಸಿ ಹೂಳು ತುಂಬಿದೆ. ಹೂಳೆತ್ತುವ ಕೆಲಸ ಮಾಡುತ್ತಿಲ್ಲ. ಸರ್ಕಾರ ಭತ್ತದ ಖರೀದಿ ಕೇಂದ್ರ ಆರಂಭಿಸಿ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ನೀರು ಬಿಡದೇ ರೈತರು ಸಾಲದ ಸುಳಿಯಲ್ಲಿ ಸಿಲುಕಿದರೆ, ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ. ಕೊನೆಯ ಭಾಗದ ರೈತರ ಬೆಳೆ ಒಣಗಿದರೆ ₹ 50 ಸಾವಿರ ಪರಿಹಾರ ವಿತರಿಸಬೇಕು. ತುಂಗಾಭದ್ರ ಜಲಾಶಯ ನೀರು ಹಂಚಿಕೆಯಲ್ಲಿ ಆಗುತ್ತಿರುವ ಅಕ್ರಮ ಕುರಿತು ವಿಶೇಷ ತನಿಖಾ ತಂಡ ರಚಿಸಬೇಕು. ಕಾರ್ಖಾನೆಗಳಿಗೆ ನೀರು ಮಾರಿಕೊಳ್ಳುವ ರಾಜಕಾರಣಿಗಳ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಗಂಗಾವತಿ ನಗರ ಮತ್ತು ಸಂಚಾರ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್, ವರ್ತಕರ ಸಂಘದ ಗಾಳಿ ಶಿವಪ್ಪ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಎ.ಹುಲಗಪ್ಪ, ಎ.ಎಲ್.ತಿಮ್ಮಣ್ಣ, ಐಹೊಳೆ ಹನುಮಂತ, ಶಿವನಗೌಡ, ರುದ್ರಪ್ಪ ಸೇರಿ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.