ADVERTISEMENT

ಮೋದಿ ಕಾರ್ಯವೈಖರಿಯಿಂದ ಭಾರತದ ಗೌರವ ಹೆಚ್ಚಿದೆ: ಬಿ.ಎಲ್.ಸಂತೋಷ

ಯುವಶಕ್ತಿ ಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 14:29 IST
Last Updated 20 ಏಪ್ರಿಲ್ 2019, 14:29 IST
ಕಾರಟಗಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಯುವಶಕ್ತಿ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮಾತನಾಡಿದರು
ಕಾರಟಗಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಯುವಶಕ್ತಿ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮಾತನಾಡಿದರು   

ಕಾರಟಗಿ:ಕಳೆದ ಐದು ವರ್ಷದಿಂದ ಪ್ರಧಾನ ಮಂತ್ರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯಿಂದಾಗಿ ಇಂದು ಭಾರತಕ್ಕೆ ಜಗತ್ತು ಗೌರವ ಕೊಡುವಂತೆ ಆಗಿದೆ. ಭಾರತವನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ಜನರು ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳಿದರು.

ಶುಕ್ರವಾರಸಂಜೆ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಯುವಶಕ್ತಿ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಣ್ಣಿರು ಸುರಿಸುವ ಮುಖ್ಯಮಂತ್ರಿಯಿಂದ ರಾಜ್ಯ ಬದಲಾಗುವುದಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರು ಮೈತ್ರಿ ಹೇಗಿರಬೇಕು ಎಂಬುವುದನ್ನೇ ಮರೆತ್ತಿದ್ದಾರೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಎರಡು ಪಕ್ಷದ ನಾಯಕರು ಅಧಿಕಾರ ಹಂಚಿಕೊಂಡಿದ್ದಾರೆ ಹೊರತು ಜನರಿಗೆ ಒಳಿತು ಮಾಡುವ ಉದ್ದೇಶದಿಂದಲ್ಲ. ಇದೆ ರೀತಿ ಕೇಂದ್ರದಲ್ಲೂ ಅಧಿಕಾರ ಹಂಚಿಕೆ ಮಾಡಲು ಅವರು ಕಸರತ್ತು ನಡೆಸುತ್ತಿದ್ದಾರೆ. ಇಂತಹ ಸರ್ಕಾರ ಅಧಿಕಾರಕ್ಕೆ ಬಂದರೆ ಭಾರತಕ್ಕೆ ಯಾವ ರೀತಿ ಗಂಡಾಂತರವಿದೆ ಎಂಬುವುದನ್ನು ಉಹಿಸಲು ಸಾಧ್ಯವಿಲ್ಲ ಎಂದರು.

ADVERTISEMENT

ನರೇಂದ್ರ ಮೋದಿ ಪ್ರಧಾನಿಯಾಗುವ ಮುಂಚೆ ಹತ್ತು ವರ್ಷ ಅಧಿಕಾರ ನಡೆಸಿದ್ದ ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರದ ನೂರಾರು ಹಗರಣದಿಂದ ಭಾರತದ ಮಾನ ಹರಾಜು ಆಗಿತ್ತು. ಆದರೆ ಕಳೆದ 2014 ರಲ್ಲಿ ಈ ದೇಶದ ಜನರ ಆಪೇಕ್ಷೆಯಂತೆ ಅಧಿಕಾರಕ್ಕೆ ಬಂದ ಮೋದಿ ಪ್ರಧಾನಿಯಾಗಿ ದೇಶದ ನಾಯಕ ಹೇಗೆ ಆಡಳಿತ ನಡೆಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲೂ ಮೋದಿ ಹವಾ ಸುನಾಮಿಯಂತೆ ಹರಡಿದೆ. ಇದನ್ನು ಸಹಿಸದ ಇಲ್ಲಿನ ಮೈತ್ರಿ ಸರ್ಕಾರದ ಮುಖಂಡರು ಹತಾಶರಾಗಿದ್ದಾರೆ ಎಂದು ಕಿಡಿ ಕಾರಿದರು.

ಕುಟುಂಬದ ಹಿತಕ್ಕೆ ಘಟ ಬಂಧನ:ಕುಟುಂಬದ ಹಿತಕ್ಕಾಗಿ ಘಟಬಂಧನ ರಚನೆಯಾಗಿದೆ. ಕಳೆದ ಐದು ವರ್ಷದಲ್ಲಿ ಮೋದಿ ಒಬ್ಬರೆ ಅಲ್ಲ, ಅವರ ಸರ್ಕಾರದ ಒಬ್ಬ ಸಚಿವರೂ ಕೂಡಾ ಹಗರಣ ಮಾಡಿಲ್ಲ. ದೇಶದ ರಕ್ಷಣೆ, ಸುರಕ್ಷತೆ, ಜನ ಸಾಮಾನ್ಯರ ಬದುಕಿಗೆ ಬೇಕಾಗುವ ಯೋಜನೆಗಳನ್ನು ಮೋದಿ ಜಾರಿ ಮಾಡಿದ್ದಾರೆ. ಕಾಂಗ್ರೆಸ್ ಜೆಡಿಎಸ್‌ನವರುಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಬಸವರಾಜ ದಡೇಸೂಗೂರು, ಸೋಮಲಿಂಗಪ್ಪ, ಹಾಲಪ್ಪ ಆಚಾರ, ಮಾಜಿ ಶಾಸಕ ದೊಡ್ಡನಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಶರಣು ತಳ್ಳಿಕೇರಿ, ಮಂಡಲ ಅಧ್ಯಕ್ಷ ಶಿವಶರಣೇಗೌಡ, ಮಂಡಲ ಯುವ ಮೋರ್ಚಾ ಅಧ್ಯಕ್ಷ ವಿನಯ ಬಾವಿ, ಮುಖಂಡರಾದ ಕೊಲ್ಲಾ ಶೇಷಗಿರಿರಾವ್, ನಾಗರಾಜ ಬಿಲ್ಗಾರ್, ವಿರೇಶ ಸಾಲೋಣಿ, ಬಿ.ಜಿ.ಅರಳಿ, ಅಮರೇಶ ಕುಳಗಿ, ಡಾ.ಕೆ.ಬಸವರಾಜ, ವಿರುಪಣ್ಣ ಕಲ್ಲೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.