ADVERTISEMENT

ಮೊಗ್ಗಿಬಸವೇಶ್ವರ ಜಾತ್ರೆ: ಏ.30ರಿಂದ ಮೇ 4ರವರೆಗೆ ಹೊಸ ರಥದ ಸಂಭ್ರಮ

ಉಮಾಶಂಕರ ಬ.ಹಿರೇಮಠ
Published 30 ಏಪ್ರಿಲ್ 2025, 6:09 IST
Last Updated 30 ಏಪ್ರಿಲ್ 2025, 6:09 IST
ಯಲಬುರ್ಗಾ ಪಟ್ಟಣದ ಮೊಗ್ಗಿಬಸವೇಶ್ವರ ದೇವಸ್ಥಾನದ ನೂತನ ರಥದ ಗಡ್ಡಿಯ ಭಾಗದಲ್ಲಿ ದೇವರ, ಶರಣರ ಹಾಗೂ ದಾರ್ಶನಿಕರ ಭಾವಚಿತ್ರಗಳನ್ನು ಕೆತ್ತಲಾಗಿದೆ
ಯಲಬುರ್ಗಾ ಪಟ್ಟಣದ ಮೊಗ್ಗಿಬಸವೇಶ್ವರ ದೇವಸ್ಥಾನದ ನೂತನ ರಥದ ಗಡ್ಡಿಯ ಭಾಗದಲ್ಲಿ ದೇವರ, ಶರಣರ ಹಾಗೂ ದಾರ್ಶನಿಕರ ಭಾವಚಿತ್ರಗಳನ್ನು ಕೆತ್ತಲಾಗಿದೆ   

ಯಲಬುರ್ಗಾ: ಬಸವ ಜಯಂತಿ ದಿನ ಅದ್ದೂರಿಯಾಗಿ ಜರುಗುವ ಪಟ್ಟಣದ ಮೊಗ್ಗಿಬಸವೇಶ್ವರರ ರಥೋತ್ಸವವು ಈ ವರ್ಷ ವಿಶೇಷತೆಗೆ ಸಾಕ್ಷಿಯಾಗಲಿದೆ. ಪ್ರತಿವರ್ಷದಂತೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ನೂತನ ರಥವು ಉದ್ಘಾಟನೆಗೊಳ್ಳಲಿದೆ.

ಪಟ್ಟಣದ ಜನರ ಮನದಾಸೆಯಂತೆ ಈ ವರ್ಷದಿಂದ ಎಳೆಯಲ್ಪಡುವ ರಥವು ಹೊಸದಾಗಿ ನಿರ್ಮಾಣಗೊಂಡು ಬೃಹದಾಕಾರವಾಗಿಯೂ ಅತ್ಯಾಕರ್ಷಕವೂ ಆಗಿದೆ. ಭಕ್ತರ ವಂತಿಕೆಯಿಂದ ಸುಮಾರು ₹ 50 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ನೂತನ ರಥವು ಪಂಚಕಳಸದ ಉತ್ಸವ ಆಗಿದ್ದರಿಂದ ನೋಡುವುದಕ್ಕಾಗಿಯೇ ಪಟ್ಟಣದ ಅನೇಕ ಕುಟುಂಬಗಳ ಸಂಬಂಧಿಕರು ಹಾಜರಾಗುತ್ತಿರುವುದು ಸಾಮಾನ್ಯವಾಗಿದೆ.

ರಥದ ಗಡ್ಡಿಯ ಮೇಲಿನ ವಿವಿಧ ಹಂತಗಳನ್ನು ಮಾಡಿದ್ದು, ಶರಣರ, ದೇವಾನುದೇವತೆಗಳ, ದಾರ್ಶನಿಕರ ಭಾವಚಿತ್ರಗಳನ್ನು ಮರದಲ್ಲಿಯೇ ಆಕರ್ಷಕವಾಗಿ ಕೆತ್ತಿ ಅಳವಡಿಸಲಾಗಿದೆ. ಪ್ರತಿಯೊಂದು ಪಟ್ಟಿಕೆಯಲ್ಲಿಯೂ ಮೂರ್ತಿಗಳ ಚಿತ್ತಾರ ನೋಡುಗರ ಗಮನ ಸೆಳೆಯುತ್ತದೆ. ರಥದ ಮೇಲಿನ ವೃತ್ತಾಕಾರದ ಗೋಪುರಕ್ಕೆ ವಿವಿಧ ಬಣ್ಣಗಳಿಂದ ಕೂಡಿದ ಬಟ್ಟೆಯ ಧ್ವಜಗಳನ್ನು ಅಳವಡಿಸಿದ್ದು ಮತ್ತಷ್ಟು ಸುಂದರವಾಗಿ ಕಾಣುವಂತಾಗಿದೆ.

ADVERTISEMENT

5 ದಿನಗಳ ಸಂಭ್ರಮ: ಜಾತ್ರೋತ್ಸವ ಪ್ರಯುಕ್ತ ಇದೇ 30ರಿಂದ ಮೇ 4ವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಏ.30ರಂದು ಬೆಳಿಗ್ಗೆ ನಂದಿ ಧ್ವಜಾರೋಹಣ, ರುದ್ರಾಭಿಷೇಕ, ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ, ಸಂಜೆ 5ಕ್ಕೆ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ವಿವಿಧ ಮಠಾಧೀಶರುಗಳು ಸಾನ್ನಿಧ್ಯ ವಹಿಸಲಿದ್ದಾರೆ.

ರಥದಲ್ಲಿನ ವೀರಭದ್ರೇಶ್ವರ ದೇವರು 

ಮೇ 1ರಂದು ಬೆಳಿಗ್ಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಹಿಂದೂ ಸೇವಾ ಪ್ರತಿಷ್ಠಾನದಿಂದ ಮನೆಯ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4ಕ್ಕೆ ಬಸವೇಶ್ವರರ ಭಾವಚಿತ್ರದ ಜೊತೆಗೆ 101 ಜೋಡೆತ್ತುಗಳ ಬೃಹತ್ ಮೆರವಣಿಗೆ ನಡೆಯಲಿದೆ. 2ರಂದು ಸಂಜೆ 7ಕ್ಕೆ ಜ್ಯೂನಿಯರ್ ರಾಜಕುಮಾರ ಅಶೋಕ ಬಸ್ತಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ, 3ರಂದು ಸಂಜೆ 7ಕ್ಕೆ ಅರುಣೋದಯ ಕಲಾ ತಂಡದಿಂದ ಜನಪದ ಕಾರ್ಯಕ್ರಮ, 4ರಂದು ಸಂಜೆ 7ಕ್ಕೆ ಸುಮಗ ಸಂಗೀತ, ಜನಪದ ಹಾಡುಗಾರಿಕೆ ಹಾಗೂ ಆಕರ್ಷಕ ಜೋಡೆತ್ತುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಗಮನ ಸೆಳೆಯುವ ದುರ್ಗಾದೇವಿ ಕೆತ್ತನೆ   
ನೂತನ ರಥೋತ್ಸವ ಕಣ್ತುಂಬಿಕೊಳ್ಳುವುದಕ್ಕೆ ಭಕ್ತರು ಕಾತುರದಲ್ಲಿದ್ದಾರೆ. ಮನಸೂರೆಗೊಳ್ಳಲಿರುವ ಹೊಸ ರಥವು ಈ ವರ್ಷದಿಂದ ಪಂಚಕಳಸದ ಉತ್ಸವ ಆಗಿರುವುದರಿಂದ ನವದಂಪತಿ ಸಂಬಂಧಿಗಳು ಸಾಕಷ್ಟು ಸಂಖ್ಯೆಯಲ್ಲಿ ಹಾಜರಾಗಲಿದ್ದಾರೆ.
ಸುರೇಶಗೌಡ ಶಿವನಗೌಡರ ಕೋಶಾಧ್ಯಕ್ಷ ಜಾತ್ರೋತ್ಸವ ಸಮಿತಿ ಯಲಬುರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.