ಕೊಪ್ಪಳ: ಪೂರ್ವ ಮುಂಗಾರಿನಿಂದಲೇ ಮಳೆ ಉತ್ತಮವಾಗಿದ್ದು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿವೆ. ಕೃಷಿ ಇಲಾಖೆ ಒಟ್ಟು 3.64 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ 1.19 ಲಕ್ಷ ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಪೂರ್ವ ಮುಂಗಾರು ಮತ್ತು ಮುಂಗಾರಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಹೀಗಾಗಿ ಭೂಮಿಯಲ್ಲಿ ಹೆಚ್ಚು ತೇವಾಂಶವೂ ಇರುವುದು ಮೆಕ್ಕೆ ಜೋಳ ಬಿತ್ತನೆ ಮಾಡುವವರಿಗೆ ಅನುಕೂಲ ಒದಗಿಸಿದೆ. 1,00,057 ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ 69,215ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಮೆಕ್ಕೆಜೋಳ ಈ ಸಲ ಗುರಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಲಿದೆ ಎಂದು ಕೃಷಿ ಇಲಾಖೆ ನಿರೀಕ್ಷೆ ಹೊಂದಿದೆ.
ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶದಲ್ಲಿ 62 ಸಾವಿರ ಹೆಕ್ಟೇರ್ ಭತ್ತದ ಕ್ಷೇತ್ರವಿದೆ. ಗಂಗಾವತಿ, ಕಾರಟಗಿ, ಕನಕಗಿರಿ ಹಾಗೂ ಕೊಪ್ಪಳದ ಒಂದಷ್ಟು ಭಾಗದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಕೆಲವರು ಪಂಪ್‌ಸೆಟ್ ಆಧಾರಿತವಾಗಿದ್ದರೆ, ಇನ್ನು ಕೆಲವರು ತುಂಗಭದ್ರಾ ನದಿ ನೀರು ನೆಚ್ಚಿಕೊಂಡಿದ್ದಾರೆ. ಪಂಪ್‌ಸೆಟ್ ಇರುವವರು ಈಗಾಗಲೇ ಭತ್ತದ ಸಸಿಗಳನ್ನು ಬೆಳೆಸುವ ಕಾರ್ಯ ಆರಂಭಿಸಿದ್ದಾರೆ. ಜಲಾಶಯಗಳ ಕ್ರಸ್ಟ್‌ಗೇಟ್‌ಗಳ ಸಾಮರ್ಥ್ಯ ಶೇ100ರಷ್ಟು ಇಲ್ಲದ ಕಾರಣ ಪೂರ್ಣವಾಗಿ ಭರ್ತಿ ಮಾಡದಂತೆ ಜಲಾಶಯಗಳ ಸುರಕ್ಷತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಇತ್ತೀಚೆಗೆ ಎಂಜಿನಿಯರ್‌ಗಳು ಸಭೆ ನಡೆಸಿದ್ದು ಒಂದು ಬೆಳೆಗೆ ಮಾತ್ರ ನೀರು ಸಿಗಬಹುದು ಎಂದು ಮುನ್ಸೂಚನೆ ಕೊಟ್ಟಿದ್ದಾರೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಭತ್ತ, ಮೆಕ್ಕಜೋಳ, ಸಜ್ಜೆ, ತೊಗರಿ, ಹೆಸರು, ಶೇಂಗಾ, ಸೂರ್ಯಕಾಂತಿ ಹಾಗೂ ಹತ್ತಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಪೂರ್ವ ಮುಂಗಾರಿನಿಂದ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿ ಮಧ್ಯದಲ್ಲಿ ಬಿಡುವು ಕೊಟ್ಟಿದ್ದರಿಂದ ಬಿತ್ತನೆಗೆ ಕೃಷಿಕರಿಗೆ ಅನುಕೂಲವಾಗಿದೆ. ಈಗ ಮತ್ತೆ ಮಳೆ ಆರಂಭವಾಗಿದ್ದು ಈ ಸಲದ ಮುಂಗಾರು ಹಂಗಾಮಿನ ಕೃಷಿ ಆಶಾದಾಯಕವಾಗಿರಲಿದೆ ಎನ್ನುವ ಭರವಸೆಯನ್ನು ರೈತರು ಹೊಂದಿದ್ದಾರೆ.
ಭೂಮಿ ಹದಗೊಳಿಸುವ ಕಾರ್ಯದಲ್ಲಿ ರೈತರು ತಲ್ಲೀನ ಮೆಕ್ಕೆಜೋಳ ನಿಗದಿಗಿಂತಲೂ ಹೆಚ್ಚು ಬಿತ್ತನೆಯಾಗುವ ಸಾಧ್ಯತೆ ಹಿಂದಿನ 15 ದಿನಗಳಲ್ಲಿ ವಾಡಿಕೆಗಿಂತ ಕೊಂಚ ಕಡಿಮೆ ಮಳೆ
ಮುಂಗಾರು ಹಂಗಾಮಿನ ಬಿತ್ತನೆ ಚುರುಕು ಪಡೆದುಕೊಂಡಿದ್ದು ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ಪೂರೈಸಲಾಗುತ್ತಿದೆ. ಕೊರತೆಯಾದರೆ ಇಲಾಖೆಯನ್ನು ಸಂಪರ್ಕಿಸಬೇಕುರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆ ಜಂಟಿ ನಿರ್ದೇಶಕ
ಪೂರ್ವ ಮುಂಗಾರಿನಲ್ಲಿ ಶೇ122ರಷ್ಟು ಹೆಚ್ಚು ಮಳೆ ಈ ಸಲದ ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಶೇ122ರಷ್ಟು ಹೆಚ್ಚು ಮಳೆ ಬಂದಿದೆ. ಮಾರ್ಚ್ ಆರಂಭದಿಂದ ಮೇ ಅಂತ್ಯದ ತನಕ ಪೂರ್ವ ಮುಂಗಾರು ಎಂದು ಪರಿಗಣಿಸಲಾಗುತ್ತಿದ್ದು ಈ ಅವಧಿಯಲ್ಲಿ ವಾಡಿಕೆ 7.86 ಸೆಂ.ಮೀ. ಇತ್ತು. ಆದರೆ 17.44 ಸೆಂ.ಮೀ. ಮಳೆ ಬಂದಿದೆ. ಆದರೆ ಮುಂಗಾರಿನ ಅವಧಿಯ ಮೊದಲ 15 ದಿನಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ವಾಡಿಕೆ ಮಳೆ 4.9 ಸೆಂ.ಮೀ. ಇದ್ದು 3.86 ಸೆಂ.ಮೀ. ಆಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು ಈ ಭಾಗದಲ್ಲಿಯೂ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆ ರೈತರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.