ADVERTISEMENT

ಮುನಿರಾಬಾದ್: ನದಿ ಮಾಲಿನ್ಯ ನೀರುನಾಯಿ ಸಂಕುಲಕ್ಕೆ ಆಪತ್ತು

ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 7:05 IST
Last Updated 2 ಜೂನ್ 2023, 7:05 IST
ಮುನಿರಾಬಾದ್ ಸಮೀಪ ಹುಲಿಗಿಯಲ್ಲಿ ಬುಧವಾರ ಅರಣ್ಯ ಇಲಾಖೆಯಿಂದ ನಡೆದ ತುಂಗಭದ್ರಾ ನದಿ ಸ್ವಚ್ಛತಾ ಕಾರ್ಯದಲ್ಲಿ ಹಳೆಯ ಬಟ್ಟೆ, ತ್ಯಾಜ್ಯ ತೆಗೆಯಲಾಯಿತು
ಮುನಿರಾಬಾದ್ ಸಮೀಪ ಹುಲಿಗಿಯಲ್ಲಿ ಬುಧವಾರ ಅರಣ್ಯ ಇಲಾಖೆಯಿಂದ ನಡೆದ ತುಂಗಭದ್ರಾ ನದಿ ಸ್ವಚ್ಛತಾ ಕಾರ್ಯದಲ್ಲಿ ಹಳೆಯ ಬಟ್ಟೆ, ತ್ಯಾಜ್ಯ ತೆಗೆಯಲಾಯಿತು   

ಮುನಿರಾಬಾದ್: ‘ಅವೈಜ್ಞಾನಿಕ ಮೀನುಗಾರಿಕೆ, ಅವೈಜ್ಞಾನಿಕ ಮರಳು ಗಣಿಗಾರಿಕೆ ಮತ್ತು ನದಿ ಮಾಲಿನ್ಯದಿಂದ ಅಪರೂಪದ ‘ನೀರು ನಾಯಿ’ಯ ಜೀವಸಂಕುಲಕ್ಕೆ ಆಪತ್ತು ಬಂದೊದಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ ಆತಂಕವ್ಯಕ್ತಪಡಿಸಿದರು.

ಕೊಪ್ಪಳ ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಮುನಿರಾಬಾದ್ ವಲಯದ ಸಂಯುಕ್ತ ಆಶ್ರಯದಲ್ಲಿ ಹುಲಿಗಿಯ ಹುಲಿಗೆಮ್ಮ ದೇವಸ್ಥಾನ ಬಳಿ, ತುಂಗಭದ್ರಾ ನದಿ ತಟದಲ್ಲಿ ಬುಧವಾರ ನಡೆದ ‘ಅಂತರರಾಷ್ಟ್ರೀಯ ನೀರು ನಾಯಿ ಸಂರಕ್ಷಣಾ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನದಿ ಪರಿಸರ ಅವಲಂಬಿಸಿರುವ ಅಪರೂಪದ ಪ್ರಾಣಿ ನೀರು ನಾಯಿ(ವೈಜ್ಞಾನಿಕ ಹೆಸರು ಆಟರ್). ನಮ್ಮ ದೇಶದ ಕಾಶ್ಮೀರ ಮತ್ತು ಅಸ್ಸಾಂ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಇದು ನಮ್ಮ ಭಾಗದಲ್ಲಿ ತುಂಗಭದ್ರಾ ನದಿ ಪರಿಸರದಲ್ಲಿ ವಾಸ್ತವ್ಯ ಕಂಡುಕೊಂಡಿದೆ. ಇದೇ ಕಾರಣದಿಂದ ಪರಿಸರವಾದಿಗಳ ಒತ್ತಾಯದ ಮೇರೆಗೆ 2015ರಲ್ಲಿ ರಾಜ್ಯಸರ್ಕಾರ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿಯವರೆಗೆ ಸುಮಾರು 34 ಕಿ.ಮೀ. ಪ್ರದೇಶವನ್ನು ‘ನೀರು ನಾಯಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸಿ, ಬೇಟೆಯಾಡುವುದನ್ನು ನಿರ್ಬಂಧಿಸಿದೆ’ ಎಂದರು.

ADVERTISEMENT

‘ನೀರಿನಲ್ಲಿ ತೋಯದ ತುಪ್ಪಳ ಚರ್ಮ, ಚಪ್ಪಟೆಯಾದ ತಲೆ, ಬಲವಾದ ಬಾಲ, ಹುಟ್ಟುಗಳಂತಿರುವ ಪಾದಗಳ ದೇಹ ರಚನೆ ಹೊಂದಿರುವ ಇದು ಅಪರೂಪದ ಜಲಚರ. ಮೀನು, ಕಪ್ಪೆ, ಏಡಿ ಇದರ ಆಹಾರಗಳು. ನದಿ ನೀರು ಶುದ್ಧೀಕರಣಕ್ಕೆ ಸಹಾಯ ಮಾಡುವ ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂದರು.

ಯಾವುದರಿಂದ ಅಪಾಯ:

‘ಅನಧಿಕೃತವಾಗಿ ಮೀನು ಹಿಡಿಯುವವರು ವಾಟರ್ ಬಾಂಬ್ ಸಿಡಿಸುವ ಪರಿಣಾಮ ಹಾಗೂ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ನದಿಗೆ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಹಳೆಯ ಬಟ್ಟೆ, ಅಪಾಯಕಾರಿ ವಸ್ತುಗಳು ನೀರು ನಾಯಿಗಳ ಜೀವ ತೆಗೆಯುತ್ತಿದೆ. ಇದು ನಿಲ್ಲಬೇಕು’ ಎಂದು ಅವರು ಅಭಿಪ್ರಾಯಪ‌ಟ್ಟರು.

ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು, ಅರಣ್ಯ ಇಲಾಖೆಯ ಪ್ರಕಾಶ್ ಪವಾಡಿ ಗೌಡ್ರು, ಶಿವರಾಜ್ ಮೇಟಿ, ಡಾ.ಅಶೋಕ್ ಕುಮಾರ್, ವಾಸವಿ ಬಿ., ಡಾ. ರಾಘವೇಂದ್ರ ಡಾ.ಎಸ್.ಕೆ. ಚೌಹಾಣ್, ಮಾರ್ಕಂಡೇಯ ಇದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ನರೇಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಛಾಯಾಚಿತ್ರ ಪ್ರದರ್ಶನ, ಬೀದಿ ನಾಟಕ ಪ್ರದರ್ಶನ ನಡೆಯಿತು. ಪರಿಸರವಾದಿಗಳು, ಅರಣ್ಯ ವಿಭಾಗದ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ನದಿಯಲ್ಲಿನ ತ್ಯಾಜ್ಯ ಮತ್ತು ಹಳೆಯ ಬಟ್ಟೆಗಳನ್ನು ತೆಗೆದು ಸ್ವಚ್ಛಗೊಳಿಸಿದರು.

ಕಾವ್ಯಾ ಚತುರ್ವೇದಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಪ್ಪಳ
ನೀರು ನಾಯಿ (ಸಾಂಧರ್ಭಿಕ ಚಿತ್ರ)

Highlights -

Quote - ತುಂಗಭದ್ರಾ ನದಿಯಲ್ಲಿ ಅಪರೂಪದ ನೀರು ನಾಯಿ ಸಂತತಿ ಇದೆ. ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಕಾವ್ಯಾ ಚತುರ್ವೇದಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.