
ಮುನಿರಾಬಾದ್: ಸಮೀಪದ ಶಿವಪುರ ಬಳಿ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ನಗರ ಗಡ್ಡಿ ಮಠದಲ್ಲಿ ಅಭಿನವ ಸೋಮನಾಥ ಶಿವಾಚಾರ್ಯರು ಕೈಗೊಂಡ 48 ದಿನಗಳ 'ಮೌನ ಅನುಷ್ಠಾನ' ಶನಿವಾರ ಮುಕ್ತಾಯವಾಯಿತು.
ಮೂಲತಹ ರಾಯಚೂರು ಜಿಲ್ಲೆಯ ನವಿಲಕಲ್ಲು ಶಾಂಭವಿ ಸಂಸ್ಥಾನ ಮಠದ ಸ್ವಾಮೀಜಿಯೂ ಆಗಿರುವ ಸೋಮನಾಥ ಶಿವಾಚಾರ್ಯರು ನಗರಗಡ್ಡಿ ಸಂಸ್ಥಾನ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅನುಷ್ಠಾನ ಕೈಗೊಂಡಿದ್ದರು.
ಶನಿವಾರ ನಡೆದ ಮುಕ್ತಾಯ ಸಮಾರಂಭದಲ್ಲಿ ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರು ಹಾಗೂ ಮೈನಳ್ಳಿ ಮಠದ ಸಿದ್ದೇಶ್ವರ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಗುರುಗಳ ಮಾರ್ಗದರ್ಶನದಲ್ಲಿ ತತ್ವನಿಷ್ಠ, ಧ್ಯಾನ, ಪೂಜೆ ಮತ್ತು ಮೌನ ಅನುಷ್ಠಾನ ಕೈಗೊಂಡಿದ್ದರು. ಧರ್ಮ ಜಾಗೃತಿ ಮತ್ತು ಭಕ್ತರಿಗೆ ಮಾರ್ಗದರ್ಶನ ಮಾಡಲು ಅವರ ಸೇವೆ ಮೀಸಲು ಎಂದರು.
ಅನುಷ್ಠಾನ ಮುಕ್ತಾಯಗೊಳಿಸಿ ಮಾತನಾಡಿದ ಸೋಮನಾಥ ಶಿವಾಚಾರ್ಯರು, ‘ತಪಸ್ಸು, ಪೂಜೆ ಮತ್ತು ಅನುಷ್ಠಾನಕ್ಕೆ ನಗರ ಗಡ್ಡಿಮಠ ಪವಿತ್ರ ಸ್ಥಳವಾಗಿದೆ’ ಎಂದರು.
ಕಂಪಸಾಗರ ಮಠದ ನಾಗಯ್ಯ ಸ್ವಾಮೀಜಿ ಸೇರಿದಂತೆ ಶಿವಪುರ, ಅಗಳಕೇರಾ, ಹುಲಿಗಿ, ಬಂಡಿಹರ್ಲಾಪುರ, ರಾಯಚೂರು ಜಿಲ್ಲೆಯ ನವಿಲುಕಲ್ಲು ಶಾಂಭವಿ ಮಠದ ಭಕ್ತರು ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.