ADVERTISEMENT

ಜೀವವೈವಿಧ್ಯ ಸಂರಕ್ಷಕ ‘ಅಂದಪ್ಪ ಕುರಿ’

ಕಾಡುಪ್ರಾಣಿಗಳಿಗೆ ನೀರು ಒದಗಿಸುವ ಅಧಿಕಾರಿ, ಅರಣ್ಯ ರಕ್ಷಣೆಗೆ ಒತ್ತು

ಉಮಾಶಂಕರ ಬ.ಹಿರೇಮಠ
Published 5 ಜನವರಿ 2019, 20:25 IST
Last Updated 5 ಜನವರಿ 2019, 20:25 IST
ಯಲಬುರ್ಗಾ ತಾಲ್ಲೂಕು ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ 2018ನೇ ಸಾಲಿನ ಬಿ.ಮಾರೆಪ್ಪ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ಕ್ಷಣ
ಯಲಬುರ್ಗಾ ತಾಲ್ಲೂಕು ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ 2018ನೇ ಸಾಲಿನ ಬಿ.ಮಾರೆಪ್ಪ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ಕ್ಷಣ   

ಯಲಬುರ್ಗಾ: ಸತತ ಮೂರು ವರ್ಷಗಳಿಂದ ಬರದ ಛಾಯೆ ತಾಲ್ಲೂಕಿನಲ್ಲಿ ಆವರಿಸಿದೆ. ಈ ಸಂದರ್ಭದಲ್ಲಿ ಆಹಾರ, ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಜಾನುವಾರುಗಳು, ಕಾಡು ಪ್ರಾಣಿಗಳಿಗೆ ಆಹಾರ ನೀರು ಒದಗಿಸುವ ಮತ್ತು ಅರಣ್ಯ ಸಂರಕ್ಷಣೆಗೆ ಕೊಡುಗೆ ನೀಡಿದ ಅರಣ್ಯ ಇಲಾಖೆ ಅಧಿಕಾರಿ ಅಂದಪ್ಪ ಕುರಿ ಅವರಿಗೆ ಬಿ.ಮಾರೆಪ್ಪ ಸ್ಮಾರಕ ಪ್ರಶಸ್ತಿ ಲಭಿಸಿದೆ.

ಜೀವವೈವಿಧ್ಯ ತಾಣವಾಗಿರುವ ಯಲಬುರ್ಗಾ ತಾಲ್ಲೂಕಿನ ಕೆಲ ಭಾಗ ಅರಣ್ಯದಿಂದ, ಮತ್ತೆ ಕೆಲ ಭಾಗ ಹಳ್ಳಕೊಳ್ಳಗಳಿಂದ ಕೂಡಿದೆ.

ಈ ಪ್ರದೇಶದಲ್ಲಿ ತೋಳ, ನರಿ, ಜಿಂಕೆ, ನವಿಲು, ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮೂರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ತಗ್ಗುಗಳನ್ನು ತೋಡಿಸಿ ನೀರು ಸಂಗ್ರಹಿಸಿ ಪ್ರಾಣಿ, ಪಕ್ಷಿಗಳ ನೀರಿನ ದಾಹ ನೀಗಿಸುವಂತೆ ಕೆಲಸವನ್ನು ಅಂದಪ್ಪ ಅವರು ಮಾಡಿದ್ದಾರೆ.

ADVERTISEMENT

ಯಲಬುರ್ಗಾ ತಾಲ್ಲೂಕು ಬಳೂಟಗಿ ಗ್ರಾಮದ ಅಂದಪ್ಪ ಅವರು 1997ರಲ್ಲಿ ಕೊಪ್ಪಳ ವಲಯದ ಬೆಟಗೇರಿಯಲ್ಲಿ ಅರಣ್ಯ ರಕ್ಷಕರಾಗಿ ಸೇವೆಗೆ ಸೇರಿದರು. ನಂತರ ಸಂಡೂರ, ಮುನಿರಾಬಾದ್, ಗಿಣಿಗೇರಾಗಳಲ್ಲಿ ಸೇವೆ ಸಲ್ಲಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವು ಗ್ರಾಮಗಳಲ್ಲಿ ಅರಣ್ಯ ಸಮಿತಿ ಹಾಗೂ ಸ್ವ ಸಹಾಯ ಸಂಘಗಳನ್ನು ರಚಿಸುವ ಮೂಲಕ ಅರಣ್ಯ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಿಂಕೆ ಮತ್ತು ನವಿಲು ಬೇಟೆ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಗಸ್ತು ತಿರುಗಿ ಪ್ರಾಣಿ ಹಂತಕರನ್ನು ಬಂಧಿಸುವಲ್ಲಿಯೂ ಅಂದಪ್ಪ ಯಶಸ್ವಿಯಾಗಿದ್ದಾರೆ.

ಇಲಾಖೆ ಜಾರಿಗೊಳಿಸಿದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವ ಇವರು ಉರುವಲಿಗಾಗಿ ಸೌದೆ ಕಡಿಯುವುದನ್ನು ತಡೆಯಲು ಗ್ಯಾಸ್ ವಿತರಣೆ ಮಾಡಿದ್ದಾರೆ. ಶಾಲೆ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಸಿಗಳನ್ನು ನೆಡಿಸಿದ್ದಾರೆ. ತಾಲ್ಲೂಕಿನ ಅನೇಕ ಕಡೆ ರಸ್ತೆಬದಿ ಸಸಿ ನೆಡುವ, ಸಸ್ಯ ಸಂತೆಗಳನ್ನು ಏರ್ಪಡಿಸಿ ಸಸಿ, ಮರ ಹಾಗೂ ಅವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಮರ ಕಡಿಯುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಕೈಗೊಳ್ಳುವಲ್ಲಿ ಅಂದಪ್ಪ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಹೆಚ್ಚು ನಿಷ್ಠೆ ತೋರಿದ್ದರಿಂದಲೇ ವಿವಿಧ ಪ್ರದೇಶದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕಾರ್ಯ ಪರಿಣಾಮಕಾರಿಯಾಗಿ ಆಗಿದೆ ಎಂಬ ಅಭಿಪ್ರಾಯ ಇಲಾಖೆ ಸಿಬ್ಬಂದಿ ಶರೀಷ್ ಕೊತ್ವಾಲ್ ಅವರದ್ದು.

ಕೊಪ್ಪಳ ತಾಲ್ಲೂಕಿನ ರುದ್ರಾಪುರ ಗ್ರಾಮದ ಹತ್ತಿರ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಅಡಿಗಲ್ಲು ಹಾಕುವಲ್ಲಿ ಕಾರಣಕರ್ತರಾದ ಅಂದಪ್ಪ ಅವರ ಉತ್ತಮ ಉತ್ತಮ ಸೇವೆಯನ್ನು ಗುರುತಿಸಿ 2013ರಲ್ಲಿ ಕೊಪ್ಪಳ ಜಿಲ್ಲಾಡಳಿತ ಬಸವ ಜಯಂತಿ ಆಚರಣೆ ಸಂದರ್ಭದಲ್ಲಿ ಬಸವ ಕಾರುಣ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ರಾಜ್ಯಮಟ್ಟದ ಪ್ರಶಸ್ತಿಯು ಜವಾಬ್ದಾರಿ ಹೆಚ್ಚಿಸಿದೆ. ಇಲಾಖೆಯ ಸಿಬ್ಬಂದಿಯ ಪ್ರೋತ್ಸಾಹದಿಂದ ಎಲ್ಲ ಕೆಲಸ ಮಾಡಲು ಸಾಧ್ಯವಾಗಿದೆ. ಸೇವೆಯನ್ನು ಗುರುತಿಸಿ ಪ್ರಶಸ್ತಿಯ ಮೂಲಕ ಗೌರವಿಸಿದ್ದು ಎಲ್ಲ ಸಿಬ್ಬಂದಿಗೆ ಸಂದ ಗೌರವ ಎಂದೇ ಭಾವಿಸಿದ್ದೇನೆ ಎಂದು ಸಿಬ್ಬಂದಿ ಹಾಗೂ ಮೇಲಧಿಕಾರಿಗಳ ಸಹಕಾರವನ್ನು ಗೌರವಿಸುವ ಅಂದಪ್ಪ ಅವರಲ್ಲಿ ಅರ್ಪಣಾ ಮನೋಭಾವ ಎದ್ದುಕಾಣುತ್ತದೆ.

*
2018ನೇ ಸಾಲಿನ ಬಿ.ಮಾರಪ್ಪ ಸ್ಮಾರಕ ಪ್ರಶಸ್ತಿ ಅಂದಪ್ಪ ಅವರಿಗೆ ಲಭಿಸಿದೆ. ಇದು ಬಳ್ಳಾರಿ ವೃತ್ತದ ಕೊಪ್ಪಳ ವಿಭಾಗಕ್ಕೆ ಸಂದ ಗೌರವ
-ಎ.ಎಚ್. ಮುಲ್ಲಾ, ಅರಣ್ಯ ವಲಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.