ADVERTISEMENT

ವಲಸೆ ತಡೆಗೆ ನರೇಗಾ ಯೋಜನೆ ಜಾರಿ

ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 12:40 IST
Last Updated 2 ಜೂನ್ 2020, 12:40 IST
ಗುಮಗೇರಾ ಗ್ರಾಮದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ನರೇಗಾ ಮಾಹಿತಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು
ಗುಮಗೇರಾ ಗ್ರಾಮದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ನರೇಗಾ ಮಾಹಿತಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು   

ಕುಷ್ಟಗಿ: ಗ್ರಾಮಾಂತರ ಪ್ರದೇಶದ ಕೃಷಿ ಕಾರ್ಮಿಕರು, ರೈತರು ವಲಸೆ ಹೋಗುವುದನ್ನು ತಡೆಯುವ ಸಲುವಾಗಿ ಜಾರಿಗೆ ತರಲಾಗಿರುವ ನರೇಗಾ ಯೋಜನೆಯ ಪ್ರಯೋಜನವನ್ನು ಎಲ್ಲರೂ ಪಡೆಯುವಂತೆ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಮಂಗಳವಾರ ತಾಲ್ಲೂಕಿನ ಗುಮಗೇರಾ ಗ್ರಾಮದಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡ ಭಿತ್ತಿಪತ್ರ ಅನಾವರಣಗೊಳಿಸಿ ಮತ್ತು ಕೂಲಿಕಾರರಿಗೆ ಮಾಸ್ಕ್ ವಿತರಿಸಿ ಮಾತನಾಡಿದರು.

ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿಯೇ ಕೆಲಸ ದೊರೆಯುತ್ತಿದ್ದು ಕೆಲಸ ಮಾಡಲು ಇಚ್ಛಿಸುವ ಕೂಲಿಕಾರರು ಹದಿನೈದು ದಿನಗಳವರೆಗೆ ಕೂಲಿ ಬೇಡಿಕೆ ಸಲ್ಲಿಸಬಹುದು. ಕೆಲಸ ಕೋರುವ ಪಂಚಾಯತಿಯಲ್ಲಿ ಕಾರ್ಮಿಕರು ಉದ್ಯೋಗ ಚೀಟಿ ಹೊಂದಿರಬೇಕು, ಇಲ್ಲದಿದ್ದರೆ ಪಂಚಾಯಿತಿಗೆ ಮಾಹಿತಿ ನೀಡಬೇಕು ಎಂದರು.

ADVERTISEMENT

ನರೇಗಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಸಾರ್ವಜನಿಕರು, ಕೂಲಿಕಾರರು ಮತ್ತು ಅಧಿಕಾರಿಗಳಲ್ಲಿ ಸಮನ್ವಯತೆ ಇರುವುದು ಅವಶ್ಯ. ಕೃಷಿ ಹೊಂಡ, ಬದುಗಳ ನಿರ್ಮಾಣ ತೋಟಗಾರಿಕೆ, ರೇಷ್ಮೆ, ಅರಣ್ಯಕೃಷಿ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ ಅವಕಾಶಗಳಿವೆ ಎಂದರು.

ಯೋಜನೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಅಪವಾದಗಳೂ ಇವೆ. ಯೋಜನೆಯ ದುರ್ಬಳಕೆಗೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದರು.

ದೂರದ ನಗರ ಪ್ರದೇಶ, ಬೇರೆ ಬೇರೆ ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವುದರಿಂದ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೊರೊನಾ ಸೋಂಕು ಹರಡದಂತೆ ಜಾಗೃತೆ ವಹಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ ವಿವರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮನವ್ವ ಭಜಂತ್ರಿ, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ, ಅಭಿವೃದ್ಧಿ ಅಧಿಕಾರಿ ಬಸವರಾಜ ಮಾಟರಂಗಿ ಮತ್ತು ಪಂಚಾಯಿತಿ ಎಲ್ಲ ಸದಸ್ಯರು, ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.