ಕೊಪ್ಪಳ: ’ಪ್ರಸ್ತಕ್ತ ದಿನಮಾನಗಳಲ್ಲಿ ಮಹಿಳೆಯರಿಗೆ ಬಹಳಷ್ಟು ಸೌಲಭ್ಯಗಳನ್ನು ನೀಡಲಾಗಿದ್ದು ಅವುಗಳ ಸದುಪಯೋಗ ಪಡೆದುಕೊಂಡು ಮುಂದೆ ಬರಬೇಕು’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಡಿಡಿಪಿಐ ಕಚೇರಿ ಮತ್ತು ಡಿಎಚ್‌ಒ ಕಚೇರಿ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಗೃಹ ಲಕ್ಷ್ಮೀ, ಶಕ್ತಿ ಯೋಜನೆಯಂತಹ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವತಂತ್ರವಾಗಿ ಜೀವನ ನಡೆಸಿದಾಗ ಅವರಿಗೆ ನಿಜವಾದ ಸ್ವಾತಂತ್ರ‍್ಯ ಸಿಗುತ್ತದೆ’ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್. ದರಗದ ‘ಹತ್ತು ವರ್ಷಗಳಿಂದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ನಡೆದುಕೊಂಡು ಬಂದಿದ್ದು, ನಮ್ಮ ಸಮಾಜದಲ್ಲಿ ಹೆಣ್ಣು ಮಗು ಬೇಡ ಗಂಡು ಬೇಕು ಎಂಬ ಅಭಿಪ್ರಾಯ ಬಲವಾಗಿ ಬೇರೂರಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನೂ ಆದ್ಯತೆ ಮೇರೆಗೆ ಕೊಡಬೇಕು’ ಎಂದು ಹೇಳಿದರು.
ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ‘ನಮ್ಮ ದೇಶ ಉಜ್ಚಲವಾಗಿ ಬೆಳೆಯಬೇಕಾದರೆ ಮಹಿಳೆ ಅಥವಾ ತಾಯಿಯ ಪಾತ್ರ ಬಹಳ ಮುಖ್ಯ ಇದೆ. ಅನೇಕ ಮಹಿಳೆಯರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ವೀರರಾಣಿ ಕಿತ್ತೂರು ಚನ್ನಮ್ಮ. ಓನಕೆ ಓಬವ್ವ ಸೇರಿದಂತೆ ಹಲವಾರು ಮಹನೀಯರೇ ಇದಕ್ಕೆ ಸಾಕ್ಷಿ’ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ ಹೆಣ್ಣು ಭ್ರೂಣಲಿಂಗ ಹತ್ಯೆಯಿಂದಾಗುವ ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದರು. ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಬಾಲ್ಯವಿವಾಹ ತಡೆಗಟ್ಟುವ ಕುರಿತು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪರಶುರಾಮ ವೈ. ಶೆಟ್ಟೆಪ್ಪನವರ, ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅನ್ನಪೂರ್ಣಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತ ಪೂಜಾರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಅನಿತಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಜಾಥಾ; ಇದಕ್ಕೂ ಮೊದಲು ನಡೆದ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಚಾಲನೆ ನೀಡಿದರು.
ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಸಹಿ ಸಂಗ್ರಹ ಆರಂಭ ಅಂಗನವಾಡಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದ ಅಂಗನವಾಡಿ ಮಗು ಪ್ರತಿಕ್ಷಾ ಓದಿದ ಸಂವಿಧಾನ ಪೀಠಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.