ಕೊಪ್ಪಳ: ಜಿಲ್ಲೆಯ ಹಾಗೂ ನೆರೆ ಜಿಲ್ಲೆಗಳ ಜನರ ಚಿತ್ತ ಈಗ ಕೊಪ್ಪಳ ತಾಲ್ಲೂಕಿನ ಹುಲಿಗಿ ಗ್ರಾಮದತ್ತ ಹರಿದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಹುಲಿಗೆಮ್ಮ ದೇವಿ ಜಾತ್ರೆಯ ವೈಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜನ ಕಾಯುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಬೇಕಾಗಿದೆ.
ಪ್ರತಿ ವರ್ಷ ಜಾತ್ರೆ ಬಂದಾಗ ಜಿಲ್ಲಾಡಳಿತ ಉತ್ತಮ ಸಿದ್ಧತೆಗಳನ್ನೇನೋ ಮಾಡುತ್ತದೆ. ಹುಲಿಗಿ ಕ್ಷೇತ್ರಕ್ಕೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ಲಕ್ಷಾಂತರ ಭಕ್ತರು ಬರುತ್ತಾರೆ. ಅನೇಕ ಭಕ್ತರು ಕಾಲ್ನಡಿಗೆ ಮೂಲಕ, ಇನ್ನೂ ಕೆಲವರು ರಾಜ್ಯದ ವಿವಿಧ ಭಾಗಗಳಿಂದ, ಮಹಾರಾಷ್ಟ್ರ, ಆಂಧ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹುಲಿಗೆಮ್ಮ ದೇವಿಯನ್ನು ಆರಾಧಿಸುತ್ತಾರೆ. ಹೀಗಾಗಿ ವಿಶೇಷ ವಾರದ ದಿನಗಳಂದೂ ಹುಲಿಗಿಯ ವಾತಾವರಣ ‘ಜಾತ್ರೆ’ಯಂತೆಯೇ ಇರುತ್ತದೆ.
ಆದ್ದರಿಂದ ಈ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಕಾಯಂ ಸೌಲಭ್ಯಗಳನ್ನು ಒದಗಿಸಲು ತ್ವರಿತವಾಗಿ ಆದ್ಯತೆ ನೀಡಬೇಕಾಗಿದೆ ಎಂದು ಭಕ್ತರು ಹೇಳುತ್ತಾರೆ. ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿ ತಟದಲ್ಲಿರುವ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೊದಲು ಕಾಯಂ ಶೌಚಾಲಯಗಳು, ಬಟ್ಟೆ ಬದಲಾಯಿಸಲು ಕೋಣೆಗಳು, ಕುಡಿಯುವ ನೀರಿಗಾಗಿ ದೇವಸ್ಥಾನದ ಸುತ್ತಮುತ್ತಲಿನ ಜಾಗಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಪ್ರಮುಖವಾಗಿ ಕಲ್ಪಿಸಬೇಕಾದ ಸೌಲಭ್ಯಗಳಾಗಿವೆ.
ಭಕ್ತರಿಂದಲೇ ಪ್ರತಿ ತಿಂಗಳು ದೇವಸ್ಥಾನಕ್ಕೆ ಕೋಟ್ಯಂತರ ರೂಪಾಯಿ ಹಣ ಭಕ್ತಿ ಸೇವೆಯ ರೂಪದಲ್ಲಿ ಹರಿದು ಬರುತ್ತಿದೆ. ಬೆಳ್ಳಿ, ಬಂಗಾರದ ಆಭರಣಗಳು ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗುತ್ತವೆ. ದೇವಾಲಯಕ್ಕೆ ಬರುವ ಆದಾಯಕ್ಕೆ ತಕ್ಕಂತೆ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವುದು ಭಕ್ತರ ಆಗ್ರಹವಾಗಿದೆ. ಮೇ 21ರಂದು ಮಹಾರಥೋತ್ಸವ ಜರುಗಲಿದೆ.
ಹುಲಿಗೆಮ್ಮ ದೇವಿಯ ಸನ್ನಿಧಿಯಲ್ಲಿ ಈಗಾಗಲೇ ದೇವಿ ಜಾತ್ರೆಯ ಕಾರ್ಯಕ್ರಮಗಳು ಆರಂಭವಾಗಿದ್ದು ನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಬಂದಿದ್ದ ರಮೇಶ ನಾಯಕ ಎನ್ನುವ ಭಕ್ತರು ’ನಮ್ಮ ಭಾಗದಲ್ಲಿ ಸವದತ್ತಿ ಇರುವಂತೆಯೇ ಈ ಭಾಗದಲ್ಲಿ ಹುಲಿಗೆಮ್ಮ ದೇವಿಯನ್ನು ಪೂಜಿಸುತ್ತಾರೆ. ಮೊದಲಿಗೆ ಹೋಲಿಸಿದರೆ ಈಗ ಹುಲಿಗಿ ಕ್ಷೇತ್ರ ಸಾಕಷ್ಟು ಸುಧಾರಣೆಯಾಗಿದೆ. ಇನ್ನಷ್ಟು ಅಭಿವೃದ್ಧಿಯಾಗುವ ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಚ್ಛತೆಗೂ ಬೇಕು ಆದ್ಯತೆ: ಭಕ್ತರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಿಗೆ ಬರಲಿದ್ದು ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ. ಎಲ್ಲೆಂದರಲ್ಲಿ ಕಸ ಬೀಸಾಡುವುದು, ಆಡುಗೆ ಮಾಡುವ ಜಾಗ ಮತ್ತು ಸುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕೂಡಿರುವಂತೆ ನೋಡಿಕೊಳ್ಳುವುದು, ನದಿಯ ದಂಡೆಯಲ್ಲಿ ಸ್ನಾನಮಾಡಿ ಬೀಸಾಡಿದ ಬಟ್ಟೆ, ದೇವರಿಗೆ ಪೂಜೆ ಸಲ್ಲಿಸಿದ ಹೂವು ಅಲ್ಲಿಯೇ ಉಳಿಯಂತೆ ನೋಡಿಕೊಳ್ಳಬೇಕಾದ ಕೆಲಸವಾಗಬೇಕಿದೆ.
ಹುಲಿಗಿ ಜಾತ್ರೆಯ ವೈಭವ ಕಣ್ತುಂಬಿಕೊಳ್ಳಲು ಪ್ರತಿವರ್ಷವೂ ಬರುತ್ತೇವೆ. ಈ ಬಾರಿ ಬಿಸಿಲು ಹೆಚ್ಚಿರುವ ಕಾರಣ ಕುಡಿಯುವ ನೀರು ಹೆಚ್ಚು ಒದಗಿಸಲು ಆದ್ಯತೆ ಕೊಡಬೇಕಿದೆ.ನಾಗರಾಜ ರಾವ್, ಹುಬ್ಬಳ್ಳಿಯಿಂದ ಬಂದಿದ್ದ ಭಕ್ತ
ವರ್ಷದಿಂದ ವರ್ಷಕ್ಕೆ ಹುಲಿಗಿ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದೇವಸ್ಥಾನದ ಸುತ್ತಲಿನ ವಾತಾವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಹಾಗೂ ಭಕ್ತರಿಗೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ಕೊಡಬೇಕು.ಸುಮಾ ನಾಯಕ, ಗಂಗಾವತಿ
ಕುಡಿಯುವ ನೀರಿಗೆ ಕಾಯಂ ವ್ಯವಸ್ಥೆ
ಕೊಪ್ಪಳ: ‘ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಹುಲಿಗಿ ಕ್ಷೇತ್ರದ ಅಭಿವೃದ್ಧಿ ಕುರಿತು ಸಭೆ ನಡೆದಿದ್ದು ಕುಡಿಯುವ ನೀರು ಒದಗಿಸಲು ಕಾಯಂ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್.ಪ್ರಕಾಶ್‌ರಾವ್ ತಿಳಿಸಿದರು. ಹುಲಿಗಿಗೆ ಬರುವ ಮಾರ್ಗದ ರಸ್ತೆಯ ಅಭಿವೃದ್ಧಿ ಮಾಡಲಾಗಿದೆ. ಸಚಿವರ ಸಭೆಯಲ್ಲಿ ಮಾಸ್ಟರ್ ಪ್ಲ್ಯಾನ್ (ಮಹಾನಕ್ಷೆಗೆ) ಅನುಮೋದನೆ ಲಭಿಸಿದೆ. ಇದರಲ್ಲಿ ಚರಂಡಿ ಕುಡಿಯುವ ನೀರಿನ ಕೊಳವೆ ಮಾರ್ಗ ಶೌಚಾಲಯ ಭಕ್ತರು ಉಳಿದುಕೊಳ್ಳಲು ಅಮ್ಮಾ ನಿಲಯ ಕಾಮಗಾರಿ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಲಾಗುತ್ತಿದೆ. ಕೆಲವೇ ತಿಂಗಳುಗಳಲ್ಲಿ ಭಕ್ತರಿಗೆ ಪೂರ್ಣಪ್ರಮಾಣದಲ್ಲಿ ಸೌಲಭ್ಯಗಳು ಲಭಿಸುತ್ತವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.