ADVERTISEMENT

ಕೊಪ್ಪಳ: ಅವೈಜ್ಞಾನಿಕ ಹಂಪ್‌ ತೆರವಿಗೆ ಸೂಚನೆ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ; ಪೊಲೀಸ್‌ ಇಲಾಖೆ ಜೊತೆ ಸಮನ್ವಯ ಸಾಧಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 14:21 IST
Last Updated 19 ಜುಲೈ 2024, 14:21 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಎಸ್‌.ಪಿ. ಡಾ. ರಾಮ್‌ ಎಲ್‌. ಅರಸಿದ್ದಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್‌ ಅತುಲ್‌, ಎಸ್‌.ಪಿ. ಡಾ. ರಾಮ್‌ ಎಲ್‌. ಅರಸಿದ್ದಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು   

ಕೊಪ್ಪಳ: ‘ಜಿಲ್ಲೆಯ ರಸ್ತೆಗಳಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಹಂಪ್‌ಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಮೊದಲು ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ವಾಹನಗಳ ವೇಗವನ್ನು ನಿಯಂತ್ರಿಸಲು ಹಾಗೂ ಅಪಘಾತಗಳನ್ನು ತಪ್ಪಿಸಲು ಬ್ಯಾರಿಕೇಡ್‌ ಅಳವಡಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಪ್ರಮುಖ ವಲಯಗಳನ್ನು ಗುರುತಿಸಿ ಅಪಘಾತ ತಪ್ಪಿಸಲು ಕ್ರಮ ವಹಿಸಬೇಕು. ನಗರ ಪ್ರದೇಶದಲ್ಲಿ ಲಾರಿಗಳಂತಹ ವಾಹನ ಸಂಚಾರಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ ಅನಗತ್ಯ ಸಂಚಾರ ದಟ್ಟಣೆ ತಪ್ಪಿಸಬೇಕು. ಗಂಗಾವತಿ ಮತ್ತು ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಗಂಭೀರ ಸಮಸ್ಯೆಯಾಗಿದ್ದು, ಇದಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ನಗರಸಭೆ ಆಯುಕ್ತರು ಚರ್ಚಿಸಿ ಸೂಕ್ತ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳು, ವಾಹನ ಸಂಚಾರ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ಶಾಲಾ-ಕಾಲೇಜು ವಾಹನಗಳಿಗೆ ಜಿಪಿಎಸ್ ಕಡ್ಡಾಯ ಅಳವಡಿಸಬೇಕು. ಈ ಬಗ್ಗೆ ಸಂಬಂಧಿಸಿದ ಶಾಲಾ ಕಾಲೇಜುಗಳಿಗೆ ಅಗತ್ಯ ನಿರ್ದೇಶನ ನೀಡಬೇಕು. ಒಂದು ವೇಳೆ ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಕಂಡುಬಂದಲ್ಲಿ ವಾಹನ ವಶಕ್ಕೆ ಪಡೆದು ಪಾಲಕರ ಚಾಲನಾ ಪರವಾನಗಿ ರದ್ದುಪಡಿಸಿ’ ಎಂದರು.

ಹೆಚ್ಚುವರಿ ಎಸ್‌ಪಿ ಹೇಮಂತಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಹೇಮಂತರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಬಿ.ನಾಲವಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಂಚಾರ ನಿಯಮ ಪಾಲನೆ ಕಡ್ಡಾಯ: ಎಸ್‌.ಪಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್‌. ಅರಸಿದ್ದಿ ಮಾತನಾಡಿ ‘ನಗರ ಪ್ರದೇಶದಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುತ್ತಿದ್ದು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಹಾಗೂ ಕಾರು ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದೆ’ ಎಂದರು. ‘ನಿರಂತರವಾಗಿ ಚಾಲನಾ ಪರವಾನಗಿ ಪರಿಶೀಲಿಸಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ. ಅದರಂತೆ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಕುರಿತು ಕ್ರಮ ಕೈಗೊಂಡು ವ್ಯವಸ್ಥಿತ ಪಾರ್ಕಿಂಗ್‌ಗೆ ನಗರಸಭೆ ಆಯುಕ್ತರೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.