ADVERTISEMENT

ಹೆಚ್ಚಿನ ದರಕ್ಕೆ ಮಾರಿದರೆ ಕ್ರಮ

ಹಿಂಗಾರು ಹಂಗಾಮಿನ ಪೂರ್ವಭಾವಿ ಸಭೆ: ಬಿತ್ತನೆ ಬೀಜ, ಗೊಬ್ಬರ ದಾಸ್ತಾನಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 14:13 IST
Last Updated 23 ಸೆಪ್ಟೆಂಬರ್ 2021, 14:13 IST
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್   

ಕೊಪ್ಪಳ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟ ನಾಶಕ ಔಷಧಿಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕಾಗಿದ್ದು, ಎಂ.ಆರ್.ಪಿ. ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.

ಹಿಂಗಾರು ಹಂಗಾಮಿನ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆ ಅಧಿಕಾರಿಗಳು, ಪ್ರಮುಖ ಬೀಜ ಮತ್ತು ರಸಗೊಬ್ಬರ ಸರಬರಾಜುದಾರರು ಹಾಗೂ ಮಾರಾಟಗಾರರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿವೆ. ಹಿಂಗಾರು ಹಂಗಾಮಿಗೆ ಅವಶ್ಯವಿರುವ ಪ್ರಮುಖ ಬಿತ್ತನೆ ಬೀಜಗಳಾದ ಕಡಲೆ, ಹಿಂಗಾರಿ ಜೋಳ, ಮೆಕ್ಕೆಜೋಳ, ಶೇಂಗಾ ಬೀಜಗಳ ಅವಶ್ಯ ದಾಸ್ತಾನನ್ನು ದಾಸ್ತಾನುಕರಿಸಲು ಹಾಗೂ ರೈತರಿಗೆ ವಿತರಣೆ ಮಾಡಲು ಸಿದ್ದತೆ ಮಾಡಿಕೊಳ್ಳಬೇಕು. ಬಿತ್ತನೆ ಸಮಯದಲ್ಲಿ ಅವಶ್ಯವಿರುವ ರಸಗೊಬ್ಬರಗಳಾದ ಡಿ.ಎ.ಪಿ ಹಾಗೂ 20:20:0:13 ರಸಗೊಬ್ಬರಗಳನ್ನು ಸರಬರಾಜು ಮಾಡಲು ರಸಗೊಬ್ಬರ ಸರಬರಾಜು ಸಂಸ್ಥೆಗಳಿಗೆ ಸೂಚನೆ ನೀಡಿದರು.

ADVERTISEMENT

ರೈತರು ಖರೀದಿಸುವ ಕೃಷಿ ಪರಿಕರಿಗಳಿಗೆ ಮಾರಾಟಗಾರರು ಕಡ್ಡಾಯವಾಗಿ ರಸೀದಿ ನೀಡಬೇಕು. ಒಂದು ವೇಳೆ ಹೆಚ್ಚಿನ ದರದಲ್ಲಿ ಕೃಷಿ ಪರಿಕರಗಳ ಮಾರಾಟ ಮಾಡುವುದು ಕಂಡು ಬಂದಲ್ಲಿ ರೈತರು ಹತ್ತಿರದ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತರಲುಬೇಕು ಎಂದರು.

ಜಿಲ್ಲೆಯ ಎಲ್ಲ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರವನ್ನು ಪಿ.ಒ.ಎಸ್ ಮಿಷನ್ಮೂಲಕ ರೈತರ ಮಾಹಿತಿ ನಮೂದಿಸಿ ಮಾರಾಟ ಮಾಡುವುದು ಕಡ್ಡಾಯವಾಗಿದ್ದು, ನೀಡಲಾಗಿರುವ ಸೂಚನೆಗಳನ್ನು ಮಾರಾಟಗಾರರು ಪಾಲಿಸದಿದ್ದರೆ ಪರವಾನಗಿಯನ್ನು ಅಮಾನತ್ತು ಅಥವಾ ರದ್ದು ಮಾಡಲಾಗುವುದು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.

ಜಂಟಿ ಕೃಷಿ ನಿರ್ದೇಶಕರಾದ ಸದಾಶಿವ ಮಾತನಾಡಿ, ರೈತರು ಮಳೆಯಾಶ್ರಿತ ಬೆಳೆಗಳಾದ ಕಡಲೆ ಮತ್ತು ಹಿಂಗಾರಿ ಜೋಳ ಬೆಳೆಗಳಿಗೆ ಬಿತ್ತನೆ ಸಮಯದಲ್ಲಿ ಸಾಮಾನ್ಯವಾಗಿ ಡಿ.ಎ.ಪಿ ರಸಗೊಬ್ಬರವನ್ನು ಬಳಸುತ್ತಾರೆ. ಒಂದು ವೇಳೆ ಡಿ.ಎ.ಪಿ ರಸಗೊಬ್ಬರ ಲಭ್ಯವಿಲ್ಲದಿದ್ದಲ್ಲಿ ಇದರ ಬದಲಾಗಿ 20:20:0:13 ರಸಗೊಬ್ಬರವನ್ನು ಬಿತ್ತನೆಗೆ ಉಪಯೋಗಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ಸಾರಿ ಉತ್ತಮ ಮಳೆಯಾಗಿದ್ದು, ಮಳೆಯಾಶ್ರಿತ ಜಮೀನುಗಳಲ್ಲಿ ಬಿತ್ತನೆ ಕ್ಷೇತ್ರ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಸಿದ್ದೇಶ್ ಸೇರಿದಂತೆ ಬೀಜ ಪೂರೈಕೆ ಕಂಪನಿಗಳ ಪ್ರತಿನಿಧಿಗಳು, ರಸಗೊಬ್ಬರ ವಿತರಕರ ಕಂಪನಿಗಳ ಮ್ಯಾನೇಜರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.