ಕುಷ್ಟಗಿ: ಇಲ್ಲಿನ ಟೆಂಗುಂಟಿ ರಸ್ತೆಯಲ್ಲಿರುವ ಸರ್ವೆ ನಂ.407/1 ಮತ್ತು 462ರಲ್ಲಿ ಕೃಷಿ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ ಕಾಂಕ್ರೀಟ್ ಮಿಶ್ರಣ ಘಟಕ ಆರಂಭಿಸಲಾಗಿದ್ದು, ಅನಧಿಕೃತ ಕಾಂಕ್ರೀಟ್ ಮಿಶ್ರಣ ಘಟಕದ ವಿರುದ್ಧ ಕ್ರಮ ಜರುಗಿಸುವಂತೆ ಕುಷ್ಟಗಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವರಿಗೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.
ಈ ಕುರಿತು ಶುಕ್ರವಾರ ಪತ್ರ ಬರೆದಿರುವ ತಹಶೀಲ್ದಾರ್ ಅಶೋಕ ಶಿಗ್ಗಾವಿ, ಕಾಂಕ್ರೀಟ್ ಮಿಶ್ರಣ ಘಟಕದ ಪ್ರದೇಶವು ನಿಯಮಗಳ ಪ್ರಕಾರ ಭೂ ಪರಿವರ್ತನೆಗೊಂಡಿಲ್ಲ. ಭೂ ಸುಧಾರಣಾ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಈ ಘಟಕದಿಂದ ಹೊರಬರುವ ಧೂಳು ಸಮೀಪದ ಕಾಲೇಜಿನ ವಿದ್ಯಾರ್ಥಿಗಳ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದ್ದು, ಘಟಕವನ್ನು ಮುಟ್ಟುಗೋಳು ಹಾಕಿಕೊಳ್ಳುವಂತೆ ಕಂದಾಯ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಜಮೀನಿನ ಮಾಲೀಕ ಉಮೇಶ ಮಂಗಳೂರು ಅವರಿಗೆ ಹಲವು ಬಾರಿ ನೋಟಿಸ್ ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾಗಿ ಕಾನೂನು ಕ್ರಮ ಜರುಗಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
‘ಕಾಂಕ್ರೀಟ್ ಮಿಶ್ರಣ ಘಟಕದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಸನಿಹದಲ್ಲಿಯೇ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಇದ್ದು, ಘಟಕದ ಧೂಳಿನಿಂದ ವಿದ್ಯಾರ್ಥಿಗಳ ಆರೋಗ್ಯ ಹದಗೆಡುತ್ತಿದೆ. ಈ ರಸ್ತೆಯಲ್ಲಿ ಅತಿ ಭಾರದ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು ಗುಂಡಿಗಳು ಬಿದ್ದಿವೆ. ಕಾಂಕ್ರೀಟ್ ಮಿಶ್ರಣವು ರಸ್ತೆಯಲ್ಲಿ ಬೀಳುತ್ತಿರುವುದರಿಂದ ಸಂಚಾರಕ್ಕೆ ವ್ಯತ್ಯಯವಾಗುತ್ತಿದೆ. ಹಾಗಾಗಿ ಅನಧಿಕೃತ ಘಟಕದ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರುದಾರ ಪ್ರಕಾಶ ತಾಳಕೇರಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಕ್ರೀಟ್ ಮಿಶ್ರಣ ಘಟಕ ಇರುವ ಜಮೀನಿನ ಮಾಲೀಕ ಉಮೇಶ ಮಂಗಳೂರು, ‘ಆರು ತಿಂಗಳ ಹಿಂದೆ ಘಟಕ ಆರಂಭಗೊಂಡಿದ್ದು, ಆಗಲೇ ಭೂ ಪರಿವರ್ತನೆಗೆ ಪ್ರಸ್ತಾವ ಸಲ್ಲಿಸಿದ್ದೇನೆ. ₹ 2 ಲಕ್ಷ ದಂಡ ಪಾವತಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದು, ಸರ್ಕಾರದ ನಿಯಮಗಳ ಪ್ರಕಾರ ದಂಡ ಮತ್ತು ಭೂ ಪರಿವರ್ತನೆ ಶುಲ್ಕ ಪಾವತಿಗೆ ಪ್ರಕ್ರಿಯೆ ನಡೆಯುತ್ತಿದೆ. ಆದರೂ ಪಟ್ಟಣದ ಕೆಲ ಕಿಡಿಗೇಡಿಗಳು ಅನಗತ್ಯವಾಗಿ ಘಟಕದ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.