ADVERTISEMENT

ಗ್ರಾಹಕರಿಗೆ ಪರಿಹಾರ ಒದಗಿಸಲು ಆಯೋಗದ ಆದೇಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:39 IST
Last Updated 23 ಏಪ್ರಿಲ್ 2025, 15:39 IST

ಕೊಪ್ಪಳ: ಸೇವಾ ನ್ಯೂನ್ಯತೆ ಎಸಗಿದ ಕಾರಣಕ್ಕಾಗಿ ಗ್ರಾಹಕರಿಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.

ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್ ಗ್ರಾಮದ ಮಮತಾ ಎಸ್. ಕಲಿಗೌಡ್ರು ಅವರು ತಮ್ಮೂರಿನ ಬಿವಿಎಸ್‌ ಮೋಟರ್ಸ್‌ನಲ್ಲಿ ₹84,000ಕ್ಕೆ ದ್ವಿಚಕ್ರ ವಾಹನ ಖರೀದಿಸಿದ್ದರು. 2022ರ ಸೆಪ್ಟೆಂಬರ್‌ನಲ್ಲಿ ಬ್ಯಾಟರಿ ಬ್ಯಾಕಪ್ ದುರಸ್ತಿ ಕೆಲಸಕ್ಕಾಗಿ ಶೋರೂಮ್‌ನಲ್ಲಿ ವಾಹನವನ್ನು ಬಿಟ್ಟಿದ್ದು, ಕೆಲವು ದಿನಗಳಲ್ಲಿ ವಾಪಸ್‌ ಕೊಡುವುದಾಗಿ ಮೌಖಿಕವಾಗಿ ಅಂಗಡಿ ಮಾಲೀಕ ಹೇಳಿದ್ದರು. ಗ್ರಾಹಕ ಮರಳಿ ಶೋ ರೂಂಗೆ ಹೋದಾಗ ಆ ಅಂಗಡಿ ಸಂಪೂರ್ಣವಾಗಿ ಬಂದ್‌ ಆಗಿದೆ. ಅಂಗಡಿಯವರ ಮೊಬೈಲ್‌ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಮನೆಗೆ ಹೋಗಿ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡಿಲ್ಲ. ಆದ್ದರಿಂದ ಗ್ರಾಹಕರು ಆಯೋಗದ ಮೊರೆ ಹೋಗಿದ್ದರು.

ದೂರು ದಾಖಲಿಸಿಕೊಂಡ ಆಯೋಗದಿಂದ ಎದುರುದಾರರಿಗೆ ನೋಟಿಸ್ ಕಳುಹಿಸಿದ್ದರೂ ಅಂಗಡಿಯ ಮಾಲೀಕ ಹಾಜರಾಗದ ಕಾರಣ ಏಕಪಕ್ಷೀಯವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ವಿಚಾರಣೆ ನಡೆಸಿ ಸೇವಾ ದೋಷ ಆಗಿದೆ ಎಂದು ಆದೇಶ ನೀಡಿದ್ದಾರೆ.

ADVERTISEMENT

ಶೋ ರೂಂನವರು ಗ್ರಾಹಕರಿಗೆ ವಾಹನ ದುರಸ್ತಿ ಮಾಡಿಕೊಡಬೇಕು. ಇಲ್ಲವಾದರೆ ವಾಹನದ ಮೌಲ್ಯದ ₹84 ಸಾವಿರಕ್ಕೆ ಶೇ. 15ರಷ್ಟು ವಾಹನ ಉಪಯೋಗಿಸಿದ ಸವಕಳಿ ಮೊತ್ತ ಕಡಿತಗೊಳಿಸಿ ₹71,400 ಪಾವತಿ ಮಾಡಬೇಕು. ಗ್ರಾಹಕರಿಗಾದ ಮಾನಸಿಕ ಯಾತನೆಗಾಗಿ ₹10 ಸಾವಿರ ಹಾಗೂ ದೂರಿನ ಖರ್ಚು ₹5 ಸಾವಿರವನ್ನು 45 ದಿನಗಳ ಒಳಗೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.