ADVERTISEMENT

ಪಡಿತರ: ಇ-ಕೆವೈಸಿ ಕಾರ್ಯ ಪ್ರಾರಂಭಿಸಲು ಸೂಚನೆ

ಜಿಲ್ಲೆಯ ನ್ಯಾಯಾಬೆಲೆ ಅಂಗಡಿಗಳಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 10:04 IST
Last Updated 3 ಡಿಸೆಂಬರ್ 2019, 10:04 IST
ಪಿ.ಸುನೀಲ್ ಕುಮಾರ್
ಪಿ.ಸುನೀಲ್ ಕುಮಾರ್   

ಕೊಪ್ಪಳ: ಬಯೊ ಮೆಟ್ರಿಕ್ ನೀಡಿ ಗುರುತು ಮರು ನೋಂದಣಿ ಮಾಡಿಸದೇ ಇರುವ ಪಡಿತರ ಚೀಟಿ ಕುಟುಂಬ ಸದಸ್ಯರುಗಳ ಇ-ಕೆವೈಸಿ ಸಂಗ್ರಹ ಕಾರ್ಯವನ್ನು ಡಿ.1 ರಿಂದ ಪ್ರಾರಂಭಿಸಲು ಜಿಲ್ಲೆಯ ವಿವಿಧ ತಾಲ್ಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ವಿತರಿಸಲಾಗಿರುವ ಅಂತ್ಯೋದಯ, ಆದ್ಯತಾ (ಬಿಪಿಎಲ್) ಹಾಗೂ ಎ.ಪಿ.ಎಲ್ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಪಡಿತರ ಕುಟುಂಬಗಳ ಪ್ರತಿಯೊಬ್ಬ ಸದಸ್ಯರ ಬಯೊಮೆಟ್ರಿಕ್ ಗುರುತಿನ ಮರು ನೋಂದಣಿ ಕಾರ್ಯವನ್ನು (ಇ-ಕೆವೈಸಿ) ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಾರಂಭಿಸಲಾಗಿತ್ತು.ಪಡಿತರದಾರರು ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಅಡಿ ನೋಂದಾಯಿಸಿಕೊಂಡಿರುತ್ತಾರೆ. ಈ ಮರುನೋಂದಣಿ ಕಾರ್ಯವನ್ನು ಕಾರಣಾಂತರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಆದರೆ ಬೆರಳಚ್ಚು (ಬಯೊ ಮೆಟ್ರಿಕ್) ನೀಡಿ ತಮ್ಮ ಗುರುತು ಮರು ನೋಂದಣೆ ಮಾಡಿಸದೇ ಇರುವ ಪಡಿತರ ಚೀಟಿ ಕುಟುಂಬ ಸದಸ್ಯರುಗಳ ಇ-ಕೆವೈಸಿ ಸಂಗ್ರಹಣೆ ಕಾರ್ಯಪ್ರಾರಂಭಿಸಿಲುನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ನ್ಯಾಯಬೆಲೆ ಅಂಗಡಿ ಹಂಚಿಕೆದಾರರು ಇ-ಕೆವೈಸಿ ಸಂಗ್ರಹಣೆವನ್ನು ಡಿ.1ರಿಂದ 10 ರವರೆಗೆ ಮತ್ತು 2020ರ ಜ1 ರಿಂದ 10 ರವರೆಗೆ ಮಾಡಬೇಕು. ನೋಂದಣಿ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣಾ ಕಾರ್ಯ ಇರುವುದಿಲ್ಲ. ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಮರು ನೋಂದಣಿ ಮಾಡಿಸಿರುವ ಪಡಿತರ ಕುಟುಂಬದ ಮುಖ್ಯಸ್ಥರು ಹಾಗೂ ಸದಸ್ಯರನ್ನು ಹೊರತುಪಡಿಸಿ ಬಾಕಿ ಉಳಿದಿರುವ ಸದಸ್ಯರುಗಳು ಮಾತ್ರ ತಮ್ಮ ಬೆರಳಚ್ಚು (ಬಯೊ ಮೆಟ್ರಿಕ್) ನೀಡಿ ಹೆಸರು ಮರು ನೋಂದಾಯಿಸಬೇಕು. ಇದಕ್ಕೆ ಪಡಿತರದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ಹಣ ನೀಡುವಂತಿಲ್ಲ.

ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ತಮ್ಮ ಬೆರಳಚ್ಚು ಗುರುತು ನೀಡಿ ಹೆಸರು ಮರು ನೋಂದಣಿ ಮಾಡಿಕೊಂಡು ಪಡಿತರ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.