ADVERTISEMENT

ಕೊಪ್ಪಳ: ತೊಗಲುಗೊಂಬೆ ಹೇಳಿದ ಅಜ್ಜಿಯ ಕಥೆ...

ವಿದೇಶಗಳಲ್ಲಿಯೂ ಕಲೆ ಪ್ರದರ್ಶಿಸಿದ ಮೊರನಾಳದ ‘ಪದ್ಮಶ್ರೀ’ ಭೀಮವ್ವ ಶಿಳ್ಳೇಕ್ಯಾತರ

ಪ್ರಮೋದ
Published 26 ಜನವರಿ 2025, 4:59 IST
Last Updated 26 ಜನವರಿ 2025, 4:59 IST
ಭೀಮವ್ವ ಶಿಳ್ಳೇಕ್ಯಾತರ
ಭೀಮವ್ವ ಶಿಳ್ಳೇಕ್ಯಾತರ   

ಕೊಪ್ಪಳ: ಆಧುನಿಕ ಯುಗದ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆಗಳು ನಶಿಸಿ ಹೋಗುತ್ತಿವೆ ಎನ್ನುವ ಆತಂಕ ನಿಮಗಷ್ಟೇ ಅಲ್ಲ; ನಮಗೂ ಕಾಡಿವೆ. ಆದರೆ ಸುಮಾರು ಒಂಬತ್ತು ದಶಕಗಳಿಂದ ನಮ್ಮನ್ನು ಪೊರೆದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಬಂದ ಖುಷಿ ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ. ಕಲೆಯ ಮೂಲಕ ಅಜ್ಜಿ ನಮ್ಮನ್ನು ಮಾತನಾಡಿಸಿ ಜನರಿಗೆ ರಸದೌತಣ ಉಣಬಡಿಸಿದ್ದಾಳೆ. ಈಗ ಅಜ್ಜಿ ನಮ್ಮನ್ನು ಪೊರೆದ ಕಥೆಯನ್ನು ನಾವೇ ಹೇಳಿಕೊಳ್ಳುವ ಸಮಯ.

ತೊಗಲುಗೊಂಬೆಯಾಟದ ಕಲಾ ಪ್ರಕಾರದ ಪರಂಪರೆ ಹೊಂದಿರುವ ಕುಟುಂಬದಿಂದಲೇ ಅಜ್ಜಿ ಬಂದಿದ್ದಾಳೆ. ಈಗ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಗೆ ಭಾಜನಳಾಗಿದ್ದಾಳೆ. ಅಜ್ಜಿಗೆ ಈಗ ನೂರಕ್ಕಿಂತಲೂ ಹೆಚ್ಚು ವರ್ಷ ವಯಸ್ಸು. ಕಣ್ಣಿನ ದೃಷ್ಟಿ ಮೊಬ್ಬಾದರೂ ಬದುಕಿನ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ.

ಕೊಪ್ಪಳ ತಾಲ್ಲೂಕಿನ ಮೊರನಾಳದಲ್ಲಿ ಜನಿಸಿದ್ದು 1929ರಲ್ಲಿ. ಇದು ಸರ್ಕಾರಿ ಲೆಕ್ಕವಾದರೂ ಅಜ್ಜಿಯ ವಯಸ್ಸು 102ರಿಂದ 103. ಅಮೆರಿಕ, ಪ್ಯಾರಿಸ್‌, ಇಟಲಿ, ಇರಾಕ್‌, ಇರಾನ್‌, ಸ್ವಿಟ್ಜರ್ಲೆಂಡ್‌ ಹೀಗೆ ಅನೇಕ ದೇಶಗಳಲ್ಲಿ ರಾಮಾಯಣ, ಮಹಾಭಾರತದ ಕಥನಗಳನ್ನು ತೊಗಲುಗೊಂಬೆಯಾಟದ ಮೂಲಕ ತೋರಿಸಿ ಜನರ ಮನಸ್ಸು ಗೆದ್ದಿದ್ದಾಳೆ.

ADVERTISEMENT

ಅಜ್ಜಿಯ ಸಾಧನೆಗೆ 1993ರಲ್ಲಿ ತೆಹ್ರಾನ್‌ ಬೊಂಬೆ ಉತ್ಸವ ಪ್ರಶಸ್ತಿ, 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ, 2005-06ನೇ ಸಾಲಿನಲ್ಲಿ ಜಾನಪದ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ, 2022ರಲ್ಲಿ ಹಿರಿಯ ನಾಗರಿಕರ ಪ್ರಶಸ್ತಿ, ರಾಜ್ಯೋತ್ಸವ ಹೀಗೆ ಸಂಘ ಸಂಸ್ಥೆಗಳಿಂದ ಅನೇಕ ಪುರಸ್ಕಾರಗಳು ಲಭಿಸಿವೆ.

ಭೀಮವ್ವ ನೂರಾರು ವರ್ಷಗಳ ಹಿಂದಿನ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ರಾಮಾಯಣ, ಮಹಾಭಾರತ ಕುರಿತ ಪ್ರಸಂಗಗಳನ್ನು ಭೀಮವ್ವ ನೆನಪಿನಿಂದ ಈಗಲೂ ಹಾಡುತ್ತಾರೆ. ಗೊಂಬೆಗಳ ಲಯಕ್ಕೆ ತಕ್ಕಂತೆ ಹಾಡುಗಳನ್ನು ಹೊಂದಿಸುವುದು, ಪೌರಾಣಿಕ ಕಥನಗಳ ಪ್ರಸ್ತುತಿಯಲ್ಲಿ ಅಪಾರ ಅನುಭವವಿದೆ.

ಭೀಮವ್ವ ಅವರ ಪತಿ ದೊಡ್ಡಬಾಳಪ್ಪ ಕೂಡ ಇದೇ ಕಲೆಯ ಕಲಾವಿದರು. ಅಜ್ಜ–ಅಜ್ಜಿಯ ತೊಗಲುಗೊಂಬೆ ಪ್ರೀತಿಯ ಸವಿಯನ್ನು ನಾವು ಅನುಭವಿಸಿದ್ದೇವೆ. ತವರಿನಲ್ಲಿ ಈ ಕಲೆ ಕಲಿತಿದ್ದ ಅಜ್ಜಿ ದೊಡ್ಡಬಾಳಪ್ಪನ ಜತೆಗೂ ತಮ್ಮ ಕಲೆಯ ಪ್ರೀತಿ ಮುಂದುವರಿಸಿದರು. ಅಜ್ಜಿಯ ಮೊಮ್ಮಕ್ಕಳಾದ ಶಿವಪ್ಪ, ಶಿವರಾಜ, ವಸಂತಕುಮಾರ್, ಪಾಂಡುರಂಗ, ರಮೇಶ್ ಹಾಗೂ ಪರುಶುರಾಮ ಎಲ್ಲರೂ ಗೊಂಬೆಯಾಟ ಕಲಿತಿದ್ದಾರೆ.

ತೊಗಲುಗೊಂಬೆ ತಯಾರಿಕೆಗೆ ಬೇಕಾಗುವ ಪರಿಕರಗಳನ್ನು ಬಳಸಿ ಬಣ್ಣ ಮಾಡುವುದು,  ಜಿಂಕೆ ಚರ್ಮವನ್ನು ಹದ ಮಾಡುವುದು ಹೀಗೆ ಕಲೆಯ ಎಲ್ಲ ಕೌಶಲಗಳು ಅಜ್ಜಿಗೆ ಕರಗತವಾಗಿವೆ. ಒಂಬತ್ತು ದಶಕಗಳಿಂದ ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿ ನಾವು ಕುಣಿಯುವಂತೆ ಮಾಡಿದ ಅಜ್ಜಿಗೆ ಈಗ ಬದುಕಿನಲ್ಲಿ ದೊಡ್ಡ ಖುಷಿ ಸಿಕ್ಕಿದೆ. ಅಜ್ಜಿಗೆ ‘ಪದ್ಮಶ್ರೀ’ ಗೌರವ ಲಭಿಸಿದ್ದಕ್ಕೆ ನಮಗೂ ಅಜ್ಜಿಯ ಕಥೆ ಹೇಳುವ ಸೌಭಾಗ್ಯವೂ ಲಭಿಸಿದೆ.

ತೊಗಲುಗೊಂಬೆಯ ಹೆಚ್ಚಿನ ದೃಶ್ಯಗಳು ಸಾಮಾನ್ಯವಾಗಿ ಮಹಾಕಾವ್ಯಗಳು, ರಾಮಾಯಣ , ಮಹಾಭಾರತ, ಪುರಾಣಗಳು ಮತ್ತು ಜಾನಪದ ಕಥೆಗಳನ್ನೇ ಒಳಗೊಂಡಿವೆ. ಇವುಗಳಲ್ಲಿ ಅಜ್ಜಿಯ ಕೈಯಿಂದ ಆಟವಾಡುವ ಭಾಗ್ಯ ನಮ್ಮದಾಗಿತ್ತು. ಅಳವಿನಿ ಅಂಚಿನಲ್ಲಿದ್ದೇವೆ ಎನ್ನುವ ಆತಂಕ ಹೊತ್ತು ಸಾಗಿದ್ದ ನಮಗೆ ಅಜ್ಜಿ ಪೊರೆದಿದ್ದರಿಂದ ಇದೇ ಕಲೆಯನ್ನು ನಂಬಿಕೊಂಡ ಕಲಾವಿದರಿಗೂ ದೊಡ್ಡ ಬಲ ಬಂದಿದೆ. ನಮಗಂತೂ ಅಜ್ಜಿಯನ್ನೇ ಹೊತ್ತು ಕುಣಿಯಬೇಕು ಎನ್ನುವಷ್ಟು ಖುಷಿಯಾಗಿದೆ.

ಇಂತಿ ಪ್ರೀತಿಯ ತೊಗಲುಗೊಂಬೆಗಳು.

ಗಿರಿ ಮೊಮ್ಮಕ್ಕಳಿಗೂ ಹರಡಿದ ಕಲಾ ಕಂಪು

ಕೊಪ್ಪಳ: ಅಜ್ಜಿ ತಾವು ಕಲೆ ಉಳಿಸಿಕೊಂಡು ಬರುವುದಷ್ಟೇ ಅಲ್ಲದೆ ತಮ್ಮ ಕುಟುಂಬದವರ ಮೂಲಕವೂ ತೊಗಲುಗೊಂಬೆಯಾಟ ಬೆಳಸಿಕೊಂಡು ಹೋಗುತ್ತಿದ್ದಾರೆ. ಭೀಮವ್ವ ಅಜ್ಜಿಗೆ 12 ಜನ ಮೊಮ್ಮಕ್ಕಳು 16 ಜನ ಮರಿ ಮೊಮ್ಮಕ್ಕಳು ಹಾಗೂ ಇಬ್ಬರು ಗಿರಿ ಮೊಮ್ಮಕ್ಕಳು ಇದ್ದಾರೆ. ಇವರಲ್ಲಿ ಬಹುತೇಕರಿಗೆ ಆಟದ ಕೌಶಲ ಕಲಿಸಿದ್ದಾರೆ. ಇವರ ಮಗ ಕೇಶಪ್ಪ ಶಿಳ್ಳೇಕ್ಯಾತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ತೊಗಲುಗೊಂಬೆಯಾಟ ಕಲಾವಿದ. 2023ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಭೀಮವ್ವ ಮಹಾಭಾರತದ ದ್ರೋಣ ಕರ್ಣ ವಿರಾಟ ವನ ಶಲ್ಯ ಹೀಗೆ ಅನೇಕ ಪರ್ವದ ಪ್ರಸಂಗಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶಿಸುತ್ತಾರೆ.

ಭೀಮವ್ವ ದೊಡ್ಡಬಾಳಪ್ಪ ಅವರಿಗೆ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ವಿಷಯವಾಗಿದೆ. ದೇಶ- ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿರುವ ಮಹಾನ್ ಕಲಾವಿದೆಗೆ ಸಿಕ್ಕ ಗೌರವವಿದು.
-ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ
ತೊಗಲುಗೊಂಬೆ ಕಲಾ ಪ್ರಕಾರಕ್ಕೆ ನಮ್ಮ ಕುಟುಂಬ ಜೀವನ ಮುಡಿಪಿಟ್ಟಿದೆ. ಪರಂಪರಾಗತವಾಗಿ ಈ ಕಲೆ ಉಳಿಸಿಕೊಂಡು ಬಂದಿದ್ದಕ್ಕೆ ಲಭಿಸಿದೆ ಗೌರವ ಇದು.
-ಕೇಶಪ್ಪ ಶಿಳ್ಳೇಕ್ಯಾತರ, ಭೀಮವ್ವ ಪುತ್ರ
ತೊಗಲುಗೊಂಬೆ ಆಡಿಸುವುದಷ್ಟೇ ನನಗೆ ಗೊತ್ತು. ನನ್ನ ಶ್ರಮ ಶ್ರದ್ಧೆ ಪ್ರೀತಿ ಎಲ್ಲವೂ ಆ ಕಲೆಗಷ್ಟೇ ಸೀಮಿತ. ಪ್ರಶಸ್ತಿಯಿಂದ ಕಲೆಗೆ ಗೌರವ ಲಭಿಸಿದೆ.
-ಭೀಮವ್ವ ಶಿಳ್ಳೇಕ್ಯಾತರ, ಪದ್ಮಶ್ರೀ ಪುರಸ್ಕೃತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.