ADVERTISEMENT

ಪಂಪಾ ಸರೋವರ ಪವಿತ್ರ ಸ್ಥಳ: ಮೊರಾರಿ ಬಾಪು ಅಭಿಮತ

ಗುಜರಾತಿನ ರಾಮ ಕಥೆ ನಿರೂಪಕ ಮೊರಾರಿ ಬಾಪು ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:49 IST
Last Updated 30 ಅಕ್ಟೋಬರ್ 2025, 5:49 IST
ಗಂಗಾವತಿ ತಾಲ್ಲೂಕಿನ ಪಂಪಾ ಸರೋವರದಲ್ಲಿ ಮೊರಾರಿ ಬಾಪು ಅವರು ರಾಮನ ಕುರಿತು ಪ್ರವಚನ ನೀಡಿದರು
ಗಂಗಾವತಿ ತಾಲ್ಲೂಕಿನ ಪಂಪಾ ಸರೋವರದಲ್ಲಿ ಮೊರಾರಿ ಬಾಪು ಅವರು ರಾಮನ ಕುರಿತು ಪ್ರವಚನ ನೀಡಿದರು   

ಗಂಗಾವತಿ: ‘ಸೀತಾಮಾತೆಯ ಹುಡುಕಾಟದ ಭಾಗವಾಗಿ ರಾಮ ಹಾಗೂ ಲಕ್ಷ್ಮಣ ಪಾದ ಇಟ್ಟ ಪುಣ್ಯನೆಲ ಈ ಕಿಷ್ಕಿಂಧಾ ಕ್ಷೇತ್ರ. ಇಲ್ಲಿಯೇ ಹನುಮಂತ ಜನಿಸಿದ್ದು, ಸಾವಿರಾರು ಭಕ್ತರು ಬಂದು ಹನುಮನ ದರ್ಶನ ಪಡೆಯುತ್ತಿರುವುದು ಸಂತಸದ ವಿಷಯ. ಈ ಮಣ್ಣಿನಲ್ಲಿ ಜನಿಸಿದ ನೀವೆಲ್ಲರೂ ಪುಣ್ಯವಂತರು’ ಎಂದು ಗುಜರಾತಿನ ರಾಮ ಕಥೆ ನಿರೂಪಕ ಮೊರಾರಿ ಬಾಪು ಹೇಳಿದರು.

ತಾಲ್ಲೂಕಿನ ಪಂಪಾ ಸರೋವರದಲ್ಲಿ ಬುಧವಾರ 11 ದಿನಗಳ ಐತಿಹಾಸಿಕ ರಾಮಯಾತ್ರೆಯ ಭಾಗವಾಗಿ ರಾಮನ ಕುರಿತು ಅವರು ಪ್ರವಚನ ನೀಡಿದರು.

‘ಪಂಪಾ ಸರೋವರ ರಾಮ–ಲಕ್ಷ್ಮಣರಿಗಾಗಿ ಶಬರಿ ಕಾದ ಸ್ಥಳವಾಗಿದೆ. ಇದರ ಸಮೀಪವೇ ಋಷಿಮುಖ ಪರ್ವತವಿದೆ. ಇಲ್ಲಿ ಸುಗ್ರೀವ ವಾಸವಿದ್ದ. ತನ್ನಣ್ಣನ ಮೋಸ ಅಡಗಿಸಲು ವಾಲಿ ಜೊತೆಗೆ ಯುದ್ಧ ಮಾಡುವಾಗ ರಾಮನು ಸುಗ್ರೀವನ ಪ್ರಾಮಾಣಿಕತೆ ಹಾಗೂ ಸತ್ಯ ಕಂಡು ವಾಲಿಯನ್ನು ಸಂಹಾರ‌ ಮಾಡಿದ’ ಎಂದರು.

ADVERTISEMENT

‘ಪಂಪಾ ಸರೋವರ, ಕಿಷ್ಕಿಂಧಾ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂಜನಾದ್ರಿ ಬೆಟ್ಟದ ಸುತ್ತಲಿನ ನಿಸರ್ಗ, ಗುಡ್ಡಗಾಡು ಪ್ರದೇಶ, ಗಿಡ-ಮರಗಳು ತುಂಬಾ ಸುಂದರವಾಗಿವೆ. ಶ್ರೀರಾಮನ ನಾಮ ಸ್ಮರಣೆ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ’ ಎಂದು ಹೇಳಿದರು.

‘ಪ್ರಭು ಶ್ರೀರಾಮ ಯಾತ್ರೆ ನಡೆಸಿದ ಪ್ರತಿಯೊಂದು ಸ್ಥಳವೂ ಪವಿತ್ರವಾಗಿವೆ. ಅದರಲ್ಲಿ ಪಂಪಾ ಸರೋವರವೂ ಒಂದಾಗಿದೆ. ಹನುಮಂತನ ಶಕ್ತಿ ಏನೆಂಬುದು ಹನುಮನಿಗೇ ಗೊತ್ತಿರಲಿಲ್ಲ. ರಾಮನ ಆಶೀರ್ವಾದದಿಂದ ತನ್ನ ಬಲ ಎಷ್ಟಿದೆ ಎಂಬುದು ಗೊತ್ತಾಯಿತು. ಎಲ್ಲರೂ ಪ್ರಭು ಶ್ರೀರಾಮನನ್ನು ಹಾಗೂ ಆಂಜನೇಯನನ್ನು ಆರಾಧಿಸಬೇಕು’ ಎಂದರು.

ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಂತೋಷ ಕೆಲೋಜಿ, ಸಿದ್ದರಾಮಯ್ಯ ಸ್ವಾಮಿ, ತಿಪ್ಪೇ ರುದ್ರಸ್ವಾಮಿ, ರಾಜೇಶ್ವರಿ, ರಾಜು ನಾಯಕ ಸೇರಿ ಇತರ ಭಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.