ADVERTISEMENT

ಕುಷ್ಟಗಿಯಲ್ಲಿ ನಾಳೆ ಪಂಚರತ್ನ ರಥಯಾತ್ರೆ ಸಮಾವೇಶ

ನಾರಾಯಣರಾವ ಕುಲಕರ್ಣಿ
Published 29 ಜನವರಿ 2023, 5:24 IST
Last Updated 29 ಜನವರಿ 2023, 5:24 IST

ಕುಷ್ಟಗಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಕ್ಷೇತ್ರದ ಅಭ್ಯರ್ಥಿ ಘೋಷಣೆಯಾದ ಬಳಿಕ ತಾಲ್ಲೂಕಿನ ಜೆಡಿಎಸ್‌ ಪಕ್ಷದಲ್ಲಿ ಅಸಮಾಧಾನ ಮೂಡಿದೆ. ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಕೆಲವರು ನಿರ್ಧರಿಸಿದ್ದಾರೆ.

ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿ ಅನೇಕ ಪ್ರಮುಖರನ್ನು ಒಳಗೊಂಡಂತೆ ಪಕ್ಷದ ಸಂಘಟನೆ, ಪ್ರಚಾರದ ಉದ್ದೇಶದಿಂದ ಜನವರಿ 30 ರಂದು ಪಟ್ಟಣದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಪಕ್ಷ ತ್ಯಜಿಸಿ ಬೇರೆ ಕಡೆ ವಲಸೆ ಹೋಗಲು ಇಚ್ಛೆಯುಳ್ಳ ಕೆಲವರು ಕುಮಾರಸ್ವಾಮಿ ಅವರಿಗೆ ಮುಜುಗರ ಆಗದಿರಲಿ ಎಂಬ ಉದ್ದೇಶವನ್ನೂ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಅಭ್ಯರ್ಥಿ ಎಂದೆ ಘೋಷಿಸಲ್ಪಟ್ಟಿ ರುವ ತುಕಾರಾಮ ಸೂರ್ವೆ ಎಲ್ಲರನ್ನೂ ಕಡೆಗಣಿಸಿದ್ದಾರೆ. ಸ್ವತಃ ದೇವೇಗೌಡರಿಂದ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದೇನೆ ಎಂಬ ಮನೋಭಾವ ಹೊಂದಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮನಸ್ಥಿತಿ ಅವರಲ್ಲಿ ಇಲ್ಲ. ಕೆಲ ವ್ಯಕ್ತಿಗಳು ಅವರ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಜೆಡಿಸ್‌ನ ಕೆಲ ಮುಖಂಡರು ತಿಳಿಸಿದ್ದಾರೆ.

ADVERTISEMENT

‘ತುಕಾರಾಮ ಮತ್ತು ಪಕ್ಷದ ಕಾರ್ಯಕರ್ತರು, ಹಿರಿಯರ ಮಧ್ಯೆ ಸಮನ್ವಯ ಕೊರತೆ ಇದೆ. ಇದರಿಂದ ಗೊಂದಲ ಮೂಡಿದೆ. ಬೇರೆ ಪಕ್ಷದವರು ನಮ್ಮನ್ನು ಆಹ್ವಾನಿಸುತ್ತಿದ್ದಾರೆ. ಏನೇ ಆದರೂ ಪಕ್ಷದ ಹಿತ ಕಾಯುವ ನಿಷ್ಠೆ ಯಿಂದ ಕೆಲಸ ಮಾಡಬೇಕಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಅಮರೇಗೌಡ ಪಾಟೀಲ ತಿಳಿಸಿದರು.

‘ಪಕ್ಷದ ಎಲ್ಲ ಘಟಕಗಳ ಪ್ರಮುಖರು, ಹಿರಿಯರು, ಹಳಬರು, ಯುವ ಜನರು ಪಕ್ಷ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದು ನಿಜ. ಇಂಥ ಸಂದರ್ಭದಲ್ಲಿ ನಾನೊಬ್ಬನೇ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಸದ್ಯ ದೂರ ಇದ್ದೇನೆ. ಯಾವ ಪಕ್ಷ ಸೇರಬೇಕೆಂಬುದು ನಿರ್ಧಾರವಾಗಿಲ್ಲ. ಪಂಚರತ್ನ ರಥಯಾತ್ರೆ ಸಮಾವೇಶದ ನಂತರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಜೆಡಿಎಸ್‌ ಮುಖಂಡ ಸಿ.ಎಂ. ಹಿರೇಮಠ ತಿಳಿಸಿದರು.

ಭಿನ್ನಾಭಿಪ್ರಾಯ ಇಲ್ಲ: ತುಕಾರಾಮ

‘ಕುಷ್ಟಗಿ ತಾಲ್ಲೂಕಿನ ಜೆಡಿಎಸ್‌ದಲ್ಲಿ ಯಾವುದೇ ಭಿನಾಭಿಪ್ರಾಯ, ಅಸಮಾಧಾನ ಇಲ್ಲ. ಎಲ್ಲವನ್ನೂ ಬಗೆಹರಿಸಿ ಎಲ್ಲರೂ ಸೇರಿ ಜನವರಿ 30ರಂದು ನಡೆಯುವ ಪಂಚರತ್ನ ಸಮಾವೇಶವನ್ನು ಯಶಸ್ವಿಗೊಳಿಸುತ್ತೇವೆ’ ಎಂದು ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ತುಕಾರಾಮ ಸೂರ್ವೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು..

‘ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದಕ್ಕೆ ಟಿಕೆಟ್ ಸಿಕ್ಕಿದೆಯೇ ಹೊರತು ಅದರಲ್ಲಿ ಯಾರ ಪ್ರಯತ್ನವೂ ಇಲ್ಲ. ಐದು ವರ್ಷಗಳಿಂದ ತಾಲ್ಲೂಕಿನಲ್ಲಿ ನಿಷ್ಕ್ರಿಯಗೊಂಡಿರುವ ಸಂಘಟನೆ ಬಲಪಡಿಸಲಿದ್ದೇವೆ. ಸಮಾವೇಶದಲ್ಲಿ ರೈತರು, ಜನಸಾಮಾನ್ಯರು, ಮಹಿಳೆಯರು ಸ್ವಯಂಪ್ರೇರಣೆಯಿಂದ ಭಾಗವಹಿಸುವರು’ ಎಂದು ಅವರು ಹೇಳಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ನಾಗರಾಜ ತಳವಾರ, ಪ್ರಮುಖರಾದ ಶರಣಪ್ಪ ಕುಂಬಾರ, ಶಾಮೀದಸಾಬ್ ಗಂಧೆಣ್ಣಿ, ವೀರೇಶ ನಿಡಗುಂದಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.