ಕೊಪ್ಪಳ: ‘ಮಕ್ಕಳು ಪಠ್ಯ ಚಟುವಟಿಕೆ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೂಡ ಆದ ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ಬುಧವಾರದ ಇಲ್ಲಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜೀವನದಲ್ಲಿ ಒಂದು ಭಾಗವೇ ಆಗಿರಬೇಕು. ಇದರಿಂದ ನಮಗೆ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಯೋಗ, ಕರಾಟೆ, ನೃತ್ಯ, ಹಾಡುವುದು, ಕ್ರೀಡೆಗಳಲ್ಲಿ ಭಾಗವಹಿಸುವುದು, ಕಾದಂಬರಿ ಹಾಗೂ ವಿಶೇಷ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದರು.
‘ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಮಕ್ಕಳು ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಬೇಕು. ಈ ಹಿನ್ನೆಲೆಯಲ್ಲಿ ನಿಮ್ಮ ಮನೆ, ಶಾಲೆ ಹಾಗೂ ಸುತ್ತು ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾರೂ ಸಹ ಬಯಲು ಶೌಚಕ್ಕೆ ಹೋಗಬಾರದು. ಕಡ್ಡಾಯವಾಗಿ ಶೌಚಾಲಯವನ್ನೇ ಬಳಕೆ ಮಾಡಬೇಕು. ಈ ಬಗ್ಗೆ ನಿಮ್ಮ ಮನೆಯವರಿಗೆ ಮತ್ತು ನಿಮ್ಮ ಮನೆಯ ಸುತ್ತಮುತ್ತ ಇರುವ ಜನರಿಗೂ ಅರಿವು ಮೂಡಿಸಬೇಕು’ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ. ಬಾಲ ಭವನದ ಕಾರ್ಯಕ್ರಮ ಸಂಯೋಜಕ ಮೆಹಬೂಬಸಾಬ ಇಲಾಹಿ ಪಾಲ್ಗೊಂಡಿದ್ದರು.
ಸೃಜನಾತ್ಮಕ ಕಲೆಯಲ್ಲಿ ವೈಷ್ಣವಿ ಪ್ರಥಮ
ಸೃಜನಾತ್ಮಕ ಕಲೆ ಪ್ರದರ್ಶನದಲ್ಲಿ ವೈಷ್ಣವಿ ಕಮ್ಮಾರ (ಪ್ರಥಮ) ತೇಜಸ್ವಿನಿ (ದ್ವಿತೀಯ) ಪುಟ್ಟರಾಜ ವೈ. ನಿಡೋಣಿ (ತೃತೀಯ) ಚಿತ್ರಕಲೆ ವಿಭಾಗದಲ್ಲಿ ಪುಟ್ಟರಾಜ ಗಂಗಾಧರ (ಪ್ರಥಮ) ಚೇತನ ಚಿತ್ರಗಾರ (ದ್ವಿತೀಯ) ಶ್ರೀನಿವಾಸ ಬಸವಂತಪ್ಪ (ತೃತೀಯ) ವಿಜ್ಞಾನದ ಸೃಜನಾತ್ಮಕ ಆವಿಷ್ಕಾರ ಸ್ಪರ್ಧೆಯಲ್ಲಿ ಪ್ರದೀಪ್ ನಡೂಲರ (ಪ್ರಥಮ) ಬಂಗಾರಿ (ದ್ವಿತೀಯ) ಅಭಿಷೇಕ (ತೃತೀಯ) ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಸಮರ್ಥ ಎಸ್. ಎಸ್.ಎಂ. (ಪ್ರಥಮ) ಕೃಷ್ಣ ಚೈತನ್ಯ ದೇಸಾಯಿ (ದ್ವಿತೀಯ) ತರುಣಾ (ತೃತೀಯ) ಸ್ಥಾನಗಳನ್ನು ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.