ADVERTISEMENT

ಸಮಸ್ಯೆಗಳ ಆಗರ ಜನರಿಗಿಲ್ಲ ಅಭಿವೃದ್ಧಿ ಅವಸರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 14:24 IST
Last Updated 18 ಜುಲೈ 2022, 14:24 IST
ಕುಕನೂರು ಪಟ್ಟಣದ ಗದಗ ರಸ್ತೆ ಮೇಲೆ ಕಸದ ರಾಶಿಯ ಮೇಲೆ ಹಂದಿಗಳ ಹಾವಳಿ
ಕುಕನೂರು ಪಟ್ಟಣದ ಗದಗ ರಸ್ತೆ ಮೇಲೆ ಕಸದ ರಾಶಿಯ ಮೇಲೆ ಹಂದಿಗಳ ಹಾವಳಿ   

ಕುಕನೂರು: ಮೂಲಸೌಲಭ್ಯಗಳ ಕೊರತೆ, ಸ್ವಚ್ಛತೆಯಿಲ್ಲದೇ ಎಲ್ಲೆಂದರಲ್ಲಿ ಹರಡಿಕೊಂಡಿರುವ ಕಸ, ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆ ಮೇಲೆಯೇ ಹರಿಯುವ ಕೊಳಚೆ ನೀರು ಸೇರಿದಂತೆ ಪಟ್ಟಣದಲ್ಲಿ ಹಲವು ಸಮಸ್ಯೆಗಳಿವೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ತಾಳಿರುವುದು ಪಟ್ಟಣದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹಂದಿಗಳ ಹಾವಳಿ: ಅನೇಕ ವಾರ್ಡ್‌ನಲ್ಲಿ ಸುತ್ತಲೂ ಗಲೀಜು ಇದ್ದು, ಸ್ವಚ್ಛತೆ ಮರಿಚಿಕೆಯಾಗಿದೆ. ಇಂತಹ ನೀರು ಸಾರ್ವಜನಿಕರ ಮನೆಗೆ ಸರಬರಾಜಾಗುವ ನೀರಿನಲ್ಲಿ ಸೇರುತ್ತಿದೆ. ಈ ನೀರನ್ನು ಕುಡಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಅಂಬೇಡ್ಕರ್ ವೃತ್ತದಿಂದ ಕೋಳಿಪೇಟೆ ರಸ್ತೆಯವರೆಗಿನ ಕಸ ಹೆಚ್ಚಾದ ಪರಿಣಾಮ ಹಂದಿಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳ ಕಾಟ ಮಿತಿಮೀರಿದ್ದು, ಡೆಂಗೆ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಈ ವಾರ್ಡ್‌ನಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಸ್ವಚ್ಛತೆ ಮಾಡುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ. ಕಳೆದ ಕೆಲವು ದಿನಗಳಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಈ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಹೆಸರಿಗಷ್ಟೇ ಪ.ಪಂ: ದಿನವಿಡೀ ಹಾಗೂ ವಾರಕ್ಕೊಮ್ಮೆಯಾದರೂ ಪಟ್ಟಣದ ವಾರ್ಡ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳ ವಿವರಣೆಯನ್ನು ಪಟ್ಟಣ ಪಂಚಾಯಿತಿ ಕೇಳುತ್ತಿಲ್ಲ. ಹೆಸರಿಗೆ ಮಾತ್ರ ಸದಸ್ಯರಿದ್ದು, ಸಮಸ್ಯೆಗಳ ನಿವಾರಣೆ ಬಗ್ಗೆ ಇವರಿಂದ ಸ್ಪಂದನೆ ದೊರೆಯುತ್ತಿಲ್ಲ. ವಾರ್ಡ್‌ನ ನಾನಾ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳಲು ಪಟ್ಟಣ ಪಂಚಾಯಿತಿಯಿಂದ ಅನುದಾನ ಬರುತ್ತಿದ್ದು, ಈ ಅನುದಾನ ಎಲ್ಲಿ ಬಳಕೆಯಾಗುತ್ತದೆ ಎಂಬ ಪ್ರಶ್ನೆ ಕೇಳಿದೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮತ ಹಾಕಿದ ಜನರಿಗೆ ಉಪಯೋಗ ಮಾಡಬೇಕಾಗಿದೆ.

ಮುಂದಿನ ದಿನಮಾನದಲ್ಲಿ ವಾರ್ಡ್ ಸಮಸ್ಯೆಗಳ ಬಗ್ಗೆ ಕ್ರಮಕೈಗೊಳ್ಳಲಾಗವುದು. ಹೈಟೆಕ್ ಶೌಚಾಲಯ ಹಾಗೂ ಹಂದಿ ಹಾವಳಿ ತಪ್ಪಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ವಾರ್ಡ್‌ನ ಸಮಸ್ಯೆ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಹಿಳೆಯರಿಗೆ ಅವಶ್ಯವಿರುವ ಹೈಟೆಕ್ ಶೌಚಾಲಯ ಆರಂಭವಾಗದೇ ಇರುವುದು ದುರದೃಷ್ಟಕರ..

ಹಂದಿಗಳ ಹಾವಳಿ ತಡೆಗಟ್ಟಬೇಕು ಸುಜಾತಾ, ಹನುಮಕ್ಕ, ಸ್ಥಳೀಯ ನಿವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.