ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಕಾರಟಗಿ: ಇಲ್ಲಿಯ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಒಬ್ಬರನ್ನು ವರ್ಗಾವಣೆ ಮಾಡಿರುವುದಕ್ಕೆ ಅವರ ಕುಟುಂಬ ವರ್ಗದವರು ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಪೊಲೀಸ್ ಕಾನ್‌ಸ್ಟೆಬಲ್ ಸುರೇಶ ಎಂಬುವವರನ್ನು ಇಲ್ಲಿಂದ ಜಿಲ್ಲೆಯ ಹನುಮಸಾಗರ ಠಾಣೆಗೆ ವರ್ಗಾವಣೆ ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ವರ್ಗಾವಣೆ ರದ್ದು ಮಾಡುವಂತೆ ಒತ್ತಾಯಿಸಿ ಕಾನ್‌ಸ್ಟೆಬಲ್ ತಮ್ಮ, ತಾಯಿ, ಮಗ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸಕ್ಕೆ ಆಗಮಿಸಿ, ಪ್ರತಿಭಟನೆಗಿಳಿದಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯೊಂದಿಗೆ ಆಗಮಿಸಿ, ಸಚಿವರ ಅನುಪಸ್ಥಿತಿಯಲ್ಲಿ ಹೀಗೆ ಮಾಡುವುದು ತರವಲ್ಲ, ಠಾಣೆಗೆ ಬಂದು ಚರ್ಚಿಸಿರಿ ಎಂದು ಮನವೊಲಿಸಿ ಠಾಣೆಗೆ ಕರೆದುಕೊಂಡು ಹೋದ ಬಗ್ಗೆ ವರದಿಯಾಗಿದೆ.
ನಮ್ಮ ಸಿಬ್ಬಂದಿ ಸಚಿವರ ಮನೆಗೆ ಹೋಗಿಲ್ಲ, ಅವರ ಕುಟುಂಬದವರು ಹೋಗಿದ್ದರು. ಅವರ ಮನವೊಲಿಸಿ ಠಾಣೆಗೆ ಕರೆತಂದು ತಿಳಿವಳಿಕೆ ನೀಡಿ ಮನೆಗೆ ಕಳುಹಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು.
ಸಚಿವರ ಆಪ್ತ ಸಹಾಯಕ ಇನಾಯತ್ ಪ್ರತಿಕ್ರಿಯಿಸಿ, ‘ಸಚಿವರು ಇಲ್ಲದಾಗ ಬಂದು ಹೀಗೆ ವರ್ತಿಸುವುದು ತರವಲ್ಲ. ಅವರು ಬಂದಾಗ ಬನ್ನಿರಿ ಎಂದು ತಿಳಿಹೇಳಿದೆ. ಅಷ್ಟರಲ್ಲೇ ಪೊಲೀಸರು ಆಗಮಿಸಿ ಅವರನ್ನು ಕರೆದುಕೊಂಡು ಹೋದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.