ADVERTISEMENT

ಹಿಂದೂ ಧರ್ಮದ ಮೇಲೆ ನಿರಂತರ ದಾಳಿ

ಗಂಗಾವತಿಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಮುತಾಲಿಕ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 3:14 IST
Last Updated 27 ಸೆಪ್ಟೆಂಬರ್ 2021, 3:14 IST
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್   

ಗಂಗಾವತಿ: ‘ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳು ಹಿಂದೂ ಧರ್ಮದ‌ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸಲಾಗುವುದು’ ಎಂದು ಶ್ರೀರಾಮ ಸೇನೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದ ಯೋಗೇಶ್ ಮುತಾ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಇತ್ತೀಚೆಗೆ ರಾಜ್ಯದಲ್ಲಿ ಹಿಂದೂ ವಿರೋಧಿಗಳಿಂದ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದೆ. ನ್ಯಾಯಾಲಯದ ಆದೇಶದ ನೆಪದಲ್ಲಿ ರಾಜ್ಯ ಸರ್ಕಾರ ದೇವಾಲಯಗಳನ್ನು ತೆರವು ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.

ಅಧಿಕಾರಿಗಳು ಸರ್ಕಾರ ನೀಡಿದ ನಿರ್ದೇ ಶನ ಪಾಲಿ ಸದೆ ಕೇವಲ ಆದೇಶ ಮುಂದಿಟ್ಟು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಿಂದೂ ಸಂಘಟನೆಗಳೆಲ್ಲವೂ ಪ್ರತಿಭಟನೆ ನಡೆಸುವ ಮೂಲಕ ಇದನ್ನು ಸರ್ಕಾರದ ಗಮನಕ್ಕೆ ತಂದು, ದೇವಾಲಯಗಳ ರಕ್ಷಣೆಗೆ ಮುಂದಾಗಲಿದ್ದೇವೆ ಎಂದರು.

ADVERTISEMENT

ಪರಿಶಿಷ್ಟ ಸಮುದಾಯದವರು ಸಹ ಸಮಾಜದಲ್ಲಿನ ಪ್ರಜೆಗಳೇ, ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ದೇಶ ಕಟ್ಟಬೇಕು. ಆದರೆ ಈಚೆಗೆ ಕೊಪ್ಪಳ ಜಿಲ್ಲೆಯಲ್ಲಿ ದೇವಾಲಯ ಪ್ರವೇಶ ಮಾಡಿದ ಮಗುವಿಗೆ ದಂಡ ಹಾಕಿದ್ದು, ಮನುಷ್ಯ ಜಾತಿಗೆ ಕಳಂಕ ತರುವ ಕೆಲಸ ಎಂದು ಹೇಳಿದರು.

ಕಲಿಯುಗದಲ್ಲಿ ಆಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿರುವುದು ದುರಂತವೇ ಸರಿ. ಇಂಥವುಗಳಿಗೆ ಆದ್ಯತೆ ನೀಡುವ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸುವ ಕೆಲಸವಾಗಬೇಕು. ಜಾತಿ ಪದ್ಧತಿ ತೊರೆದು ನಾವೆಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಜೀವನ ನಡೆಸಬೇಕು ಎಂದರು.

ರಾಜ್ಯದಲ್ಲಿ ಹೆಚ್ಚಾಗಿ ಕ್ರಿಶ್ಚಿಯನ್ ಮತಾಂತರ ನಡೆಯುತ್ತಿದೆ. ಮತಾಂತರದ ವಿರುದ್ಧ ಹಿಂದೂ ಸಮಾಜವನ್ನು ಒಗ್ಗೂಡಿಸಲು ಅಕ್ಟೋಬರ್ 30 ಮತ್ತು 31 ರಂದು ಗಂಗಾವತಿಯಲ್ಲಿ ಹಿಂದೂ ಸಮಾಜದ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶಕ್ಕೆ ಮಧ್ಯಪ್ರದೇಶದ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಉಪಾಧ್ಯಕ್ಷ ವಿಠ್ಠಲ್ ನಾವಡೆ, ಶ್ರವಣಕುಮಾರ ರಾಯ್ಕರ್, ಕಾಶಿನಾಥ ಶಿರಗೇರಿ, ಹುಸೇನಪ್ಪಸ್ವಾಮಿ ಹಾಗೂ ಪಂಪಾಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.