ADVERTISEMENT

ಕಾಂಗ್ರೆಸ್‌ ಸೋಲಿಗೆ ಸಾಮೂಹಿಕ ಹೊಣೆ: ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 24 ಮೇ 2019, 14:32 IST
Last Updated 24 ಮೇ 2019, 14:32 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿದರು. ಸೋತ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಇದ್ದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿದರು. ಸೋತ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಇದ್ದರು   

ಕೊಪ್ಪಳ: 'ಕಾಂಗ್ರೆಸ್‌ ಪಕ್ಷದ ಮುಖಂಡರು ವ್ಯಾಪಕವಾಗಿಪ್ರಚಾರ ಮಾಡಿದ್ದರೂ ನಮ್ಮ ಪಕ್ಷ ಸೋತಿದೆ.ಮತದಾರರ ತೀರ್ಪಿಗೆ ನಾವು ತಲೆ ಬಾಗಿದ್ದೇವೆ. ಈ ಸೋಲಿಗೆ ನಾವು ಸಾಮೂಹಿಕ ಹೊಣೆ ಹೊರುವುದಾಗಿ' ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಸ್ಪಷ್ಟನೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಮತ್ತು ಸಮ್ಮಿಶ್ರ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದವು. ಆದರೂ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. ಈ ಸೋಲಿಗೆ ನಾವು ಆತ್ಮವಲೋಕನ ಮಾಡಿಕೊಳ್ಳುವುದಾಗಿ ಹೇಳಿದರು.

ರಾಜ್ಯದಲ್ಲಿ ಚಾಮರಾಜನಗರ ಮತ್ತು ಕೊಪ್ಪಳ ಕ್ಷೇತ್ರದಲ್ಲಿ ಮಾತ್ರ ಕಡಿಮೆ ಅಂತರದಲ್ಲಿ ಸೋತಿದ್ದೇವೆ. ಎಲ್ಲ ಜಾತಿ, ಜನಾಂಗದವರು ನಮ್ಮನ್ನು ಬೆಂಬಲಿಸಿದ್ದಾರೆ. ಮಾಜಿ ಶಾಸಕರು, ಜಿಲ್ಲಾ ಮುಖಂಡರು ಅಭ್ಯರ್ಥಿ ಗೆಲುವಿಗೆ ಒಮ್ಮತದಿಂದ ಕೆಲಸ ಮಾಡಿದ್ದರೂ ಮೋದಿ ಅಲೆಯಿಂದ ಸಂಗಣ್ಣ ಕರಡಿ ಗೆದ್ದಿದ್ದಾರೆ. ಇನ್ನೂ ಮುಂದೆ ಆದರೂ ಜನ ನೆನಪಿಡುವಂತಹ ಶಾಶ್ವತವಾದ ಕೆಲಸವನ್ನು ಬಿಜೆಪಿ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಇವಿಎಂ ಬಗ್ಗೆ ಇನ್ನೂ ಸಂಶಯ: ಮಂಡ್ಯದಲ್ಲಿ ಕೆಲವೇ ಸಾವಿರ ಅಂತರಗಳಲ್ಲಿ ಮುನ್ನಡೆಯಿದ್ದ ಸುಮಲತಾ ಸಮಯ ಕಳೆದಂತೆ ಸಾವಿರ, ಸಾವಿರ ಲೀಡ್‌ ನಲ್ಲಿ ಗೆದ್ದಿದ್ದಾರೆ. ಸೋಲಿಲ್ಲದ ಸರದಾರ ಎಂದು ಹೆಸರು ಪಡೆದಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದಾರೆ. ಇವುಗಳನ್ನೆಲ್ಲ ನೋಡಿದಾಗ ಇವಿಎಂ ಮಷಿನ್ ಬಗ್ಗೆ ನಮಗೆ ಇನ್ನೂ ಸಂಶಯವಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಬ್ಯಾಲೆಟ್‌ ಪೇಪರ್‌ ಮೂಲಕವೇ ಮತದಾನ ಮಾಡುವ ಮೊದಲಿನ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬುವುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಹೇಳಿದರು.

ರಾಜಶೇಖರ ಹಿಟ್ನಾಳ ವಿಷಾದ: ಕ್ಷೇತ್ರದಲ್ಲಿ ಸಹೋದರ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೂ ನಾನು ಸೋತಿದ್ದೇನೆ. ಜನರ ತೀರ್ಪಿಗೆ ಗೌರವ ಇದೆ. ಈ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ನಮ್ಮ ವೈಫಲ್ಯವನ್ನು ಸರಿಪಡಿಸಿಕೊಳ್ಳುವುದಾಗಿ ಹೇಳಿದರು.

ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಹೋರಾಟ ಮಾಡಲಾಗುವುದು. ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಕುಟುಂಬ ರಾಜಕಾರಣ ಎಲ್ಲೆಡೆ ಇದೆ. ಅದು ಚರ್ಚೆಯ ವಸ್ತುವೇ ಅಲ್ಲ. ಬಿಜೆಪಿಯವರು ಹೇಳಿದ ಸುಳ್ಳು, ಪ್ರಚಾರದ ಅಬ್ಬರದಿಂದ ತಮಗೆ ಸೋಲು ಉಂಟಾಯಿತು ಎಂದು ಹೇಳಿದರು.

ಶಾಸಕ, ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಚುನಾವಣೆಯಲ್ಲಿ ನಾವು ಸೈನಿಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಪ್ರಚಾರ ಸಮಯದಲ್ಲಿ ಟೀಕೆ, ಟಿಪ್ಪಣಿ ಮಾಮೂಲಿ. ಆದರೂ ಜನತೆ ದೇಶ ಕೇಂದ್ರೀತ ವಿಷಯಕ್ಕೆ ಹೆಚ್ಚು ಒಲುವು ತೋರಿದ್ದು, ಇದರಿಂದ ಅವರಿಗೆ ಗೆಲುವು ಆಗಿದೆ. ಇದರ ಹೊರತು ನಮ್ಮ ವೈಫಲ್ಯ ಯಾವುದೇ ರೀತಿಯಲ್ಲಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಜಿಲ್ಲಾ ವಕ್ತಾರ ರವಿ ಕುರಗೋಡ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.