ಕಾರಟಗಿ: ‘ನಿಯಮಿತವಾಗಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಮಾರಕ ರೋಗಗಳಿಂದ ಮುಕ್ತರಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.
ತಾಲ್ಲೂಕಿನ ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ವಿಶೇಷ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಆರೋಗ್ಯ ಸೇವಾ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿಸುವ ಉದ್ದೇಶದಿಂದ ಸರ್ಕಾರ ಅರಿವು ಮೂಡಿಸುತ್ತಿದೆ. ಪ್ರತಿ ಹೆರಿಗೆಯನ್ನೂ ಆಸ್ಪತ್ರೆಯಲ್ಲಿಯೇ ಮಾಡಿಸಬೇಕು. ಮಗು ಹುಟ್ಟಿದ ಅರ್ಧ ಗಂಟೆಯ ಒಳಗೆ ತಾಯಿ ಎದೆಹಾಲು ನೀಡಲು ಆರಂಭಿಸಿ 6 ತಿಂಗಳವರೆಗೆ ಎದೆಹಾಲು ಮಾತ್ರ ನೀಡಬೇಕು. 6 ತಿಂಗಳ ನಂತರ ಪೂರಕ ಪೌಷ್ಟಿಕ ಆಹಾರ ನೀಡಬೇಕು’ ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹುಸೇನ್ ಬಾಷಾ, ಆಯುಷ್ ವೈದ್ಯರಾದ ಡಾ.ಸ್ಮಿತಾ, ಸಿ.ಎಚ್.ಒ. ಪರಶುರಾಮ ಮಾತನಾಡಿದರು.
ಮುಖಂಡರಾದ ಅಶೋಕ ರಾಠೋಡ, ನಾಗಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ರೇಖಾ, ಗಾಯತ್ರಿ, ಶ್ರೀದೇವಿ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವಣ್ಣಯ್ಯ, ಆಶಾ ಕಾರ್ಯಕರ್ತೆಯರಾದ ಪುಷ್ಪಾ, ಚನ್ನಮ್ಮ ಹಾಗೂ ವಿರುಪಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ, ನಾಗರಿಕರು, ಗರ್ಭಿಣಿಯರು ಹಾಗೂ ತಾಯಂದಿರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.