ADVERTISEMENT

ಕೊಪ್ಪಳ | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:45 IST
Last Updated 29 ಆಗಸ್ಟ್ 2025, 5:45 IST
ಕೊಪ್ಪಳದಲ್ಲಿ ಗುರುವಾರ ರಾಜ್ಯ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು
ಕೊಪ್ಪಳದಲ್ಲಿ ಗುರುವಾರ ರಾಜ್ಯ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು   

ಕೊಪ್ಪಳ: ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯದ ಜನರಿಗೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

‘ನಮಗೆ ಒಳಮೀಸಲಾತಿ ನೀಡಬೇಕು ಎಂದು ಮೂರು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆ ಸಂಪೂರ್ಣವಾಗಿ ಈಡೇರಿಸಿಲ್ಲ. ರಾಜ್ಯ ಸರ್ಕಾರ ಬಲಾಢ್ಯ ಸಮುದಾಯಗಳ ಜೊತೆ ಸೇರಿ ಶೇ. 1ರಷ್ಟು ಒಳಮೀಸಲಾತಿ ನೀಡಿ ಆದೇಶ ಹೊರಡಿಸಿದೆ. ನಮಗೆ ಬೇರೆ ಯಾರ ಪಾಲೂ ಬೇಡ. ನಮ್ಮ ಹಕ್ಕು ನಮಗೆ ಕೊಡಿ’ ಎಂದು ಹೋರಾಟ ನಿರತರು ಆಗ್ರಹಿಸಿದರು.

‘ಸಾಕಷ್ಟು ವರ್ಷಗಳಿಂದ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದೇವೆ. ಶಿಕ್ಷಣದಿಂದ ವಂಚಿತರಾಗಿದ್ದೇವೆ. ಸರಿಯಾಗಿ ಸೂರು ಕೂಡ ಇಲ್ಲದೆ ಇನ್ನೊಬ್ಬರ ಜಾಗದಲ್ಲಿ ಟೆಂಟ್‌ ಹಾಕಿಕೊಂಡು ಆತಂಕದಿಂದಲೇ ಬದುಕು ಕಳೆಯುತ್ತಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಮರುಪರಿಶೀಲಿಸಿ ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ತತ್ವದಡಿ ಶೇ. 1ರಷ್ಟು ಒಳಮೀಸಲಾತಿ ಜಾರಿಗೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜನಪ್ರತಿನಿಧಿಗಳು ಒಳಮೀಸಲಾತಿ ವಿಚಾರದಲ್ಲಿ ಜಾತಿ ರಾಜಕಾರಣ ಮಾಡಬಾರದು ಎಂದರು. ಪ್ರತಿಭಟನೆ ವೇಳೆ ಚನ್ನದಾಸರು ವೃತ್ತಿಪರವಾಗಿ ತಾವು ಬಳಕೆ ಮಾಡುವ ವಾದ್ಯಗಳನ್ನು ನುಡಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಪರಸಪ್ಪ ಚೆನ್ನದಾಸರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರೆಪ್ಪ ಚೆನ್ನದಾಸರ, ಜಿಲ್ಲಾ ಅಧ್ಯಕ್ಷ ದುರಗಪ್ಪ ದೊಡ್ಡಮನಿ, ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತ ಚನ್ನದಾಸ‌ರ ಹಾಗೂ ಅನೇಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಶೇ. 1ರಷ್ಟು ಮೀಸಲಾತಿ ನೀಡಲು ಒತ್ತಾಯ ವೃತ್ತಿಪರ ವಾದ್ಯಗಳನ್ನು ನುಡಿಸಿ ಹೋರಾಟ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಮಾಜದ ಮುಖಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.