ಗಂಗಾವತಿ: ವಿವಿಧ ಇಲಾಖೆಗಳಲ್ಲಿ ಗೌರವ ಧನ, ಅರೆಕಾಲಿಕೆ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವವರ ಸೇವೆಯನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸ್ಕೀಂ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕರ್ತರು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಗೌರವ ಧನ, ಅರೆಕಾಲಿಕ ನೌಕರರು, ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರು ಕೋವಿಡ್ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜೀವನ ಭದ್ರತೆ ಒದಗಿಸುವ ಜೊತೆಗೆ ಸರ್ಕಾರಿ ನೌಕರಿ, ಕನಿಷ್ಟ ವೇತನ, ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಆರೋಗ್ಯ ಕ್ಷೇತ್ರ ಬಲಪಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಒಟ್ಟು ಜಿಡಿಪಿಯ ಶೇ 6ರಷ್ಟು ಅನುದಾನ ಆರೋಗ್ಯ ವಲಯಕ್ಕೆ ಮೀಸಲಿಟ್ಟು, ಕೋವಿಡ್ ಹಾಗೂ ಕೋವಿಡೇತರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಕೆಲಸದ ವೇಳೆ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ₹ 50 ಲಕ್ಷ ಪರಿಹಾರ ವಿತರಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಕೋವಿಡ್ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುತ್ತಿರುವ ಎಲ್ಲರಿಗೂ ಮಾಸಿಕ ₹ 10 ಸಾವಿರ ಹೆಚ್ಚುವರಿ ಅಪಘಾತ ಭತ್ಯೆ ನೀಡುವ ಜೊತೆಗೆ ಅಗತ್ಯ ಸುರಕ್ಷಾ ಸಲಕರಣೆಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದ್ದರು.
ನಗರದ ಶ್ರೀ ಕೃಷ್ಣದೇವರಾಯ ವೃತ್ತದಿಂದ ತಹಶೀಲ್ದಾರರ ಕಚೇರಿಯವರೆಗೆ ಪಾದಯಾತ್ರೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಯು.ನಾಗರಾಜ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಮುಖಂಡ ಶರಣು ಪಾಟೀಲ್, ವಿಜಯಲಕ್ಷ್ಮಿ ಆಚಾರ್, ತ ಶಾರದಾ ಕಟ್ಟಿಮನಿ, ಲಾಲ್ ಬಿ, ಜ್ಯೋತಿ ಲಕ್ಷ್ಮಿ, ಗೀತಾ, ರಾಜೇಶ್ವರಿ, ಶರಣಮ್ಮ, ನಿಂಗಮ್ಮ, ರಾಧಾ, ಚನ್ನಮ್ಮ, ಮೇರುನಿಶಾ, ಅನ್ನಪೂರ್ಣ, ಕಸ್ತೂರಮ್ಮ, ಬಸಲಿಂಗಮ್ಮ, ಯಲ್ಲಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.