ADVERTISEMENT

ಕುಕನೂರು | ಪಿಎಸ್ಐ ವರ್ತನೆ ಸರಿ ಇಲ್ಲ: ಶರಣಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:53 IST
Last Updated 30 ಜುಲೈ 2025, 5:53 IST

ಕುಕನೂರು: ‘ಕುಕನೂರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಗುರುರಾಜ್ ಟಿ. ವರ್ತನೆ ಸರಿ ಇಲ್ಲ. ಇಲ್ಲಿನ ಶಾಸಕರ ಕುಮ್ಮಕ್ಕಿನಿಂದ ಜನಸಾಮಾನ್ಯರು ಹಾಗೂ ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಗುಂಗಾಡಿ ಶರಣಪ್ಪ ಆರೋಪಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಖಾಸಗಿ ವಿದ್ಯುತ್ ಉತ್ಪಾದನೆ ಮಾಡುವ ಕಂಪನಿಗಳ ಹಾವಳಿ ಹೆಚ್ಚಾಗಿದ್ದು, ರೈತರಿಗೆ ಭರವಸೆಗಳನ್ನು ನೀಡಿ ಭೂಮಿ ಕಬಳಿಸಲಾಗುತ್ತಿದೆ. ಈ ಭಾಗದಲ್ಲಿ ₹ 1,000 ಕೋಟಿ ಅವ್ಯವಹಾರ ನಡೆದಿದೆ. ಇದಕ್ಕೆ ಮುಂದಿನ ದಿನದಲ್ಲಿ ಸೂಕ್ತ ದಾಖಲೆಗಳೊಂದಿಗೆ ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.

‘ಇತ್ತೀಚಿಗೆ ತಾಲ್ಲೂಕಿನ ಕೋಳಿಹಾಳ ಗ್ರಾಮದಲ್ಲಿ ಸ್ಥಳೀಯ ರೈತರು ಹಾಗೂ ಸರೆಂಟಿಕಾ ವಿಂಡ್ ಫ್ಯಾನ್ ಕಂಪನಿಯವರ ಜೊತೆ ಮಾತಿನ ಚಕಮಕಿ ನಡೆಯುವ ವೇಳೆ ಸಿಪಿಐ ಮೌನೇಶ್ವರ ಪಾಟೀಲ್ ಹಾಗೂ ಕುಕನೂರು ಪಿಎಸ್ಐ ಗುರುರಾಜ್ ಟಿ. ಮಧ್ಯಸ್ಥಿಕೆ ವಹಿಸಿದ್ದಾರೆ. ಈ ವೇಳೆ ನನ್ನ ಹಾಗೂ ಪಿಎಸ್ಐ ಗುರುರಾಜ ಅವರ ನಡುವೆ ವಾಗ್ವಾದವಾಗಿದ್ದು ತೀವ್ರ ಹಂತಕ್ಕೆ ಹೋಗಿ ನನ್ನನ್ನು ಬಂಧಿಸಲಾಯಿತು’ ಎಂದು ಶರಣಪ್ಪ ಹೇಳಿದರು.

ADVERTISEMENT

‘ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಟ್ಟುಕೊಂಡು ಎಂಟು ತಾಸು ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡು ನಂತರ ನ್ಯಾಯಾಲಯಕ್ಕೆ ಕಳಿಸಿದ್ದಾರೆ. ನನ್ನ ಹೋರಾಟಕ್ಕೆ ಪಕ್ಷದ ನಾಯಕರ ಬೆಂಬಲವಿದೆ. ಮುಂದೆ ಅವರ ನೆರವಿನೊಂದಿಗೆ ಹೋರಾಟ ಮಾಡುತ್ತೇನೆ’ ಎಂದು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.