ADVERTISEMENT

"ಮನುಕುಲಕ್ಕೆ ಮಾಡಿದ ಘೋರ ಅನ್ಯಾಯ'

ಪ್ರತಿಭಟನಾನಿರತ ರೈತರ ಮೇಲೆ ಗುಂಡು ಹಾರಿಸಿ ಹತ್ಯೆ: ಎಸ್‌ಯುಸಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 10:03 IST
Last Updated 25 ಮೇ 2018, 10:03 IST
ತಮಿಳುನಾಡಿನ ತೂತ್ತುಕುಡಿಯಲ್ಲಿ ನಡೆದ ಗೋಲಿಬಾರ್ ಘಟನೆ ಖಂಡಿಸಿ ಕೊಪ್ಪಳದಲ್ಲಿ ಗುರುವಾರ ಎಸ್‌ಯುಸಿಇಐ ನೇತೃತ್ವದಲ್ಲಿ ಲೇಬರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು
ತಮಿಳುನಾಡಿನ ತೂತ್ತುಕುಡಿಯಲ್ಲಿ ನಡೆದ ಗೋಲಿಬಾರ್ ಘಟನೆ ಖಂಡಿಸಿ ಕೊಪ್ಪಳದಲ್ಲಿ ಗುರುವಾರ ಎಸ್‌ಯುಸಿಇಐ ನೇತೃತ್ವದಲ್ಲಿ ಲೇಬರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು   

ಕೊಪ್ಪಳ: ತಮಿಳುನಾಡಿನ ತೂತ್ತುಕುಡಿ ಯಲ್ಲಿ ಎಐಡಿಎಂಕೆ ನೇತೃತ್ವದ ಸರ್ಕಾರ ಪೊಲೀಸರ ಮೂಲಕ ಗೋಲಿಬಾರ್ ನಡೆಸಿ 13 ಪ್ರತಿಭಟನಾಕಾರರ ಹತ್ಯೆ ಖಂಡಿಸಿ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ(ಸಿ) ಕಾರ್ಯ ಕರ್ತರು ನಗರದ ಲೇಬರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.

ವೇದಾಂತ ಕಂಪನಿ ಸ್ಟೆರ್‍ಲೈಟ್ ಘಟಕ ಹೊರಸೂಸುವ ವಿಷಾನಿಲಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಹಾಗೂ ಕ್ಯಾನ್ಸರ್‌ನಂತ ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದು. ಇಷ್ಟಾಗಿಯೂ ಸ್ಟೆರ್‍ಲೈಟ್ ತನ್ನ ಘಟಕವನ್ನು ವಿಸ್ತರಿಸಲು ಮುಂದಾಗಿತ್ತು, ಇದನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿದ್ದು, ಮನುಕುಲಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಬ್ಬರು ಮಹಿಳೆಯರು ಸಹ ಪ್ರಾಣ ಕಳೆದುಕೊಂಡು, ಹಲವಾರು ಜನ ತೀವ್ರವಾಗಿ ಗಾಯಗೊಂಡಿ ದ್ದಾರೆ. ಅಷ್ಟೆ ಅಲ್ಲದೆ ವೇದಾಂತ ಕಂಪನಿ ಮೇಲೆ ಹಲವಾರು ಮೂಲಭೂತ ಕಾನೂನುಗಳ ಉಲ್ಲಂಘನೆಯ ಆರೋಪವಿದೆ. ರಾಸಾಯನಿಕ ತ್ಯಾಜ್ಯ ಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು, ವಿಷಾನಿಲದ ಸೋರಿಕೆ ನಿಲ್ಲಿಸಿಲ್ಲದಿರುವು ದರಿಂದ ಜನರ ಆರೋಗ್ಯ ಮೇಲೆ ಭೀಕರ ಪರಿಣಾಮಗಳು ಉಂಟಾಗುತ್ತಿವೆ. ಸ್ಟೆರ್‍ಲೈಟ್ ಘಟಕವನ್ನು ಮುಚ್ಚಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆಜ್ಞೆ ನೀಡಿದ್ದರೂ ಉಲ್ಲಂಘಿಸಿರುವುದು ಅತ್ಯಂತ ಘೋರ ಅಪರಾಧ ಎಂದು ಖಂಡಿಸಿದರು.

ADVERTISEMENT

ಇದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆ ನಡೆಸಿದ ಜನರ ಮೇಲೆ ನಿರ್ದಾಕ್ಷಿಣ್ಯವಾಗಿ ಗೋಲಿಬಾರ್ ಮಾಡಿ ನ್ಯಾಯಯುತ ಪ್ರತಿಭಟನೆಯನ್ನು ಹತ್ತಿಕ್ಕಿದೆ. ಈ ಘಟನೆಯಿಂದ ಕಣ್ಣಿಗೆ ರಾಚುವಂತೆ ಸಾಬೀತಾಗುವುದೇನೆಂದರೆ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಸ್ಟೆರಲೈಟ್ ಘಟಕವನ್ನು ಈ ಕೂಡಲೇ ಮುಚ್ಚಬೇಕು. ಅಪರಾಧಿ ಪೊಲೀಸ್ ಅಧಿಕಾರಿಯನ್ನು ಗುರುತಿಸಿ ಶಿಕ್ಷಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಕೂಡಲೇ ನೀಡಬೇಕು, ಕಠಿಣ ಮಾಲಿನ್ಯ ನಿಯಮಗಳನ್ನು ಹಾಕಿ ಲಾಭಕೋರ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಹಿತಿ ಅಲ್ಲಮ ಪ್ರಭು ಬೆಟದೂರ, ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯಕರ್ತರಾದ ರಮೇಶ ವಂಕಲಕುಂಟಿ, ಶರಣು ಗಡ್ಡಿ, ಶರಣಬಸವ ಪಾಟೀಲ, ರಾಯಣ್ಣ ಗಡ್ಡಿ, ಮಲ್ಲಪ್ಪ ಮದಿನೂರ, ಮುತ್ತು ಬೇಲೂರು ಭಾಗವಹಿಸಿದ್ದರು. ಪಾಪುಸಾಬ್ ಬಸವರಾಜ, ಶಿವಮೂರ್ತಿ ಇದ್ದರು.

ರೈತರ ಪ್ರತಿಭಟನೆ

ಕೊಪ್ಪಳ: ತಮಿಳುನಾಡಿನ ರೈತರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಸರ್ಕಾರದ ವಿರುದ್ಧ ನ್ಯಾಯಾಂಗ ತನಿಖೆ ನಡೆಸಿ ಕ್ರಮ ಜರುಗಿಸಬೇಕು, ಮೃತ ರೈತ ಕುಟುಂಬಗಳಿಗೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಕರ್ನಾಟಕ ರೈತ ಸಂಘ ಆಗ್ರಹಿಸಿದೆ. ಈ ಕುರಿತು ಗುರುವಾರ ತಹಶೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿದ ಸಂಘಟನೆಯ ಮುಖಂಡರು, 100 ದಿನ ಪ್ರತಿಭಟನೆ ಮಾಡಿದರೂ ಎಚ್ಚೆತ್ತುಕೊಳ್ಳದ ಸರ್ಕಾರದ ವಿರುದ್ಧ ಜನತೆ ಆಕ್ರೋಶ ಸಹಜವಾಗಿದೆ. ಆದರೆ ಗೋಲಿಬಾರ್ ಮಾಡುವ ಮೂಲಕ ದಮನ ನೀತಿ ಅನು ಸರಿಸಿರುವ ನಡೆ ಖಂಡನೀಯ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೇಮರಾಜ ವೀರಾಪುರ ಹೇಳಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಗುಡದಪ್ಪ, ಮಲ್ಲೇಶಗೌಡ, ಮೌಲಾ ಹುಸೇನ್, ಲಕ್ಷ್ಮಣ ಕಾತರಕಿ, ರವಿ, ಹುಸೇನಸಾಬ್ ಗಡ್ಡದ, ಹನುಮೇಶ ಇದ್ದರು. ನಂತರ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.