ADVERTISEMENT

ಇತಿಹಾಸ ಬದಲಿಸಲು ಸ್ಪರ್ಧೆ: ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 16:27 IST
Last Updated 28 ನವೆಂಬರ್ 2022, 16:27 IST

ಕೊಪ್ಪಳ: ‘ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಸತತವಾಗಿ ಮತ್ತೆ ಗೆಲ್ಲುವುದಿಲ್ಲ ಎನ್ನುವುದು ನಡೆದುಕೊಂಡು ಬಂದ ರೂಢಿ. ಈ ಇತಿಹಾಸವನ್ನು ಬದಲಿಸುವ ಸಲುವಾಗಿಯೇ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಎಲ್ಲಾ ಕಡೆಯೂ ಟಿಕೆಟ್‌ ಆಕಾಂಕ್ಷಿಗಳಿಗೆ ಆಸೆ ಇರುವುದು ಸಹಜ. ಸಿದ್ದರಾಮಯ್ಯನವರು ಹೆಸರು ಘೋಷಿಸಿದ್ದು ಆಕಸ್ಮಿಕ. ಅವರು ಸತ್ಯಕ್ಕೆ ಹತ್ತಿರವಾಗಿ ಇರುವುದನ್ನೇ ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ನಮ್ಮ ಐದು ಜನರಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್‌ ಕೊಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಅರ್ಹತೆ ಇರುವವರು, ಕ್ಷೇತ್ರದಲ್ಲಿ ದುಡಿದವರಿಗೆ ಟಿಕೆಟ್‌ ನೀಡಲಾಗುತ್ತದೆ. ಈ ಸಲದ ಚುನಾವಣೆಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ಇದರಲ್ಲಿ ಯಾವ ಅನುಮಾನ ಬೇಡ’ ಎಂದರು.

ADVERTISEMENT

’ಸಿದ್ದರಾಮಯ್ಯ ಅವರು ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದರೆ ನಾನೇ ಸ್ಥಾನ ಬಿಟ್ಟುಕೊಡುವೆ. ಅವರನ್ನು ಗೆಲ್ಲಿಸುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತಳಪಾಯದಿಂದಲೇ ದೇಶ ಕಟ್ಟಿದ್ದು ಕಾಂಗ್ರೆಸ್‌ನವರು. ಬಿಜೆಪಿ ಧರ್ಮದ ಮೂಲಕ ಜನರನ್ನು ರೊಚ್ಚಿಗೆಬ್ಬಿಸುತ್ತಿದೆ. ಹಿಂದೂತ್ವ ಮುಂದಿಟ್ಟುಕೊಂಡು ಮಾತನಾಡುತ್ತಿದೆ. ನಾನು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹಿಂದೂಗಳು ಅಲ್ಲವೇನು?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.