ADVERTISEMENT

ಕೊಪ್ಪಳ: ಕಾರ್ಯಕರ್ತರಿಗೆ ರೊಟ್ಟಿಯಾದರೂ ನೀಡಿ: ಹಿಟ್ನಾಳಗೆ ಮುದುಗಲ್ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:12 IST
Last Updated 27 ಜುಲೈ 2025, 4:12 IST
ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಬಕೊವಿ ನೂತನ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ, ನಿರ್ದೇಶಕರು ಹಾಗೂ ಕೆಎಂಎಫ್‌ ಸದಸ್ಯರನ್ನು ಸನ್ಮಾನಿಸಲಾಯಿತು
ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಬಕೊವಿ ನೂತನ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ, ನಿರ್ದೇಶಕರು ಹಾಗೂ ಕೆಎಂಎಫ್‌ ಸದಸ್ಯರನ್ನು ಸನ್ಮಾನಿಸಲಾಯಿತು   

ಕೊಪ್ಪಳ: ’ನೀವೆಲ್ಲರೂ ಈಗ ದೊಡ್ಡ ಸ್ಥಾನಗಳಲ್ಲಿದ್ದೀರಿ, ನಿತ್ಯ ನೀವು ಅಮೃತವನ್ನೇ ಉಂಡರೂ ನಿಮ್ಮನ್ನು ನೆಚ್ಚಿಕೊಂಡ ಕಾರ್ಯಕರ್ತರಿಗೆ ಕನಿಷ್ಠ ರೊಟ್ಟಿಯನ್ನಾದರೂ ಕೊಡಿ. ಅವರ ಹಿತ ಕಾಯಲು ಕೆಲಸ ಮಾಡಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಶಾಂತಣ್ಣ ಮುದುಗಲ್ ಅವರು ಹೇಳಿದರು.

ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಪಕ್ಷದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಒಕ್ಕೂಟದ ಅಧ್ಯಕ್ಷರಾದವರಿಗೆ ದೊಡ್ಡ ಜವಾಬ್ದಾರಿಯಿದೆ. ರೈತರು ಹಾಗೂ ಪಕ್ಷದ ಕಾರ್ಯಕರ್ತರ ಹಿತ ಕಾಯಬೇಕು’ ಎಂದು ಸಲಹೆ ನೀಡಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ ‘ಹಿಟ್ನಾಳ ಅನಿರೀಕ್ಷಿತವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಾಯಿತು.  ಭೀಮಾನಾಯ್ಕ ಆಡಳಿತ ವೈಖರಿಗೆ ಅನೇಕರು ಬೇಸರಗೊಂಡಿದ್ದರು. ಹಿಟ್ನಾಳ ಮೇಲೆ ಸಾಕಷ್ಟು ನಿರೀಕ್ಷೆಯಿದ್ದು ಪ್ರತಿ ಊರಿಗೂ ಸೊಸೈಟಿ ಮಾಡಬೇಕು. ಸಹಕಾರಿ ತತ್ವದಡಿ ಒಕ್ಕೂಟ ಬಲಪಡಿಸಬೇಕು’ ಎಂದು ಹೇಳಿದರು.

ADVERTISEMENT

ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ 'ಒಕ್ಕೂಟ ಹೂವಿನ ಹಾಸಿಗೆಯಲ್ಲ. ನಷ್ಟದಲ್ಲಿರುವ ಒಕ್ಕೂಟವನ್ನು ಲಾಭದ ದಾರಿಗೆ ತರುವ ಸವಾಲು ಹಿಟ್ನಾಳ ಮುಂದಿದೆ. ಅಧ್ಯಕ್ಷರಾಗಿ ಹಿಟ್ನಾಳ ತಮ್ಮ ಅಭಿವೃದ್ಧಿಯಷ್ಟೇ ಅಲ್ಲ ಒಕ್ಕೂಟದ ಅಭಿವೃದ್ಧಿಯನ್ನೂ ಮಾಡಬೇಕು. ಹಿಂದೆ ಅಧ್ಯಕ್ಷರಾಗಿ ಈಗ ಉಪಾಧ್ಯಕ್ಷರಾಗಿರುವ ಎನ್‌. ಸತ್ಯನಾರಾಯಣ ಮಾರ್ಗದರ್ಶನ ಮಾಡಬೇಕು’ ಎಂದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಒಕ್ಕೂಟದ ನಿರ್ದೇಶಕರಾದ ಕೃಷ್ಣರೆಡ್ಡಿ ಗಲಬಿ, ಎನ್‌. ಸತ್ಯನಾರಾಯಣ, ಕಮಲವ್ವ ಗೌರಾಳ, ಮಂಜುನಾಥ ನಿಡಶೇಷಿ, ಕೆಎಂಎಫ್‌ ಸದಸ್ಯ ಹಂಪಯ್ಯಸ್ವಾಮಿ, ಪಕ್ಷದ ಮುಖಂಡರಾದ ಲತಾ ಗವಿಸಿದ್ದಪ್ಪ ಚಿನ್ನೂರ, ಮಾಲತಿ ನಾಯಕ, ಗಾಳೆಪ್ಪ ಪೂಜಾರ, ಎಂ.ಆರ್. ವೆಂಕಟೇಶ, ಎಸ್‌.ಬಿ. ನಾಗರಳ್ಳಿ, ಮೈನುದ್ದೀನ್‌ ಮುಲ್ಲಾ, ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ನಾಲ್ಕೂ ಜಿಲ್ಲೆಗಳಿಗೆ ಅನುಕೂಲ ಕಲ್ಪಿಸಿ ಒಕ್ಕೂಟವನ್ನು ಲಾಭದಾಯಕವನ್ನಾಗಿ ಮಾಡುವೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸೊಸೈಟಿ ಆರಂಭಿಸುವ ಗುರಿಯಿದೆ. ನಿಮ್ಮೆಲ್ಲರ ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ.
- ರಾಘವೇಂದ್ರ ಹಿಟ್ನಾಳ, ರಾಬಕೊವಿ ಒಕ್ಕೂಟದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.