ADVERTISEMENT

ಕುಷ್ಟಗಿ: ಹಣ್ಣು, ರೇಷ್ಮೆ ಬೆಳೆಗಾರರಿಗೆ ನಷ್ಟ

ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಸರ್ಕಾರಕ್ಕೆ ವರದಿ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 2:41 IST
Last Updated 30 ಏಪ್ರಿಲ್ 2022, 2:41 IST
ಕುಷ್ಟಗಿ ತಾಲ್ಲೂಕು ಕೆ.ಬೋದೂರು ಗ್ರಾಮದ ರೈತ ಶ್ರೀಶೈಲ ಅವರ ರೇಷ್ಮೆಹುಳು ಸಾಕಾಣಿಕೆ ಶೆಡ್‌ ಹುಳುಗಳ ಸಹಿತ ಬಿರುಗಾಳಿಗೆ ನೆಲಕ್ಕೆ ಒರಗಿರುವುದು
ಕುಷ್ಟಗಿ ತಾಲ್ಲೂಕು ಕೆ.ಬೋದೂರು ಗ್ರಾಮದ ರೈತ ಶ್ರೀಶೈಲ ಅವರ ರೇಷ್ಮೆಹುಳು ಸಾಕಾಣಿಕೆ ಶೆಡ್‌ ಹುಳುಗಳ ಸಹಿತ ಬಿರುಗಾಳಿಗೆ ನೆಲಕ್ಕೆ ಒರಗಿರುವುದು   

ಕುಷ್ಟಗಿ: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಮನೆಗಳು ಹಾಗೂ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.

ಮಳೆಗಿಂತ ಗುಡುಗು–ಸಿಡಿಲೇ ಹೆಚ್ಚಾಗಿತ್ತು. ಬಿರುಗಾಳಿ ಬೀಸಿದ್ದರಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ಸೀಮಾಂತರದಲ್ಲಿನ ಮಾವು, ದಾಳಿಂಬೆ, ಪಪ್ಪಾಯಿ, ತರಕಾರಿ ಹಾಗೂ ಇತರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

‘ಪ್ರಾರಂಭಿಕ ಅಂದಾಜಿನ ಪ್ರಕಾರ ಸುಮಾರು 34 ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ಹಾನಿ ಉಂಟಾಗಿದೆ. ಮಾವಿನಕಾಯಿಗಳು ನೆಲಕ್ಕೆ ಉದುರಿವೆ. ಮುಂಗಡ ಹಣ ಕೊಟ್ಟು ತೋಟಗಳನ್ನು ಗುತ್ತಿಗೆ ಪಡೆದಿದ್ದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ’ ಎಂದು ತಹಶೀಲ್ದಾರ್ ಎಂ.ಸಿದ್ದೇಶ್‌ ತಿಳಿಸಿದರು.

ADVERTISEMENT

ಮನೆ, ಶೆಡ್‌ಗಳಿಗೂ ಹಾನಿ ಸಂಭವಿಸಿದೆ. ಕೆ.ಬೋದೂರು ಗ್ರಾಮದ ಸೀಮಾಂತರದಲ್ಲಿ ಶ್ರೀಶೈಲಪ್ಪ ಎಂಬ ರೈತರಿಗೆ ಸೇರಿದ ರೇಷ್ಮೆ ಹುಳು ಸಾಕಾಣಿಕೆ ಶೆಡ್‌ ಉರುಳಿ ಬಿದ್ದಿದೆ. ಸುಮಾರು ಎರಡು ನೂರು ಮೊಟ್ಟೆಗಳಷ್ಟು ಹುಳುಗಳು ಶೆಡ್‌ನಲ್ಲಿವು, ಪೊರೆ ಕಳಚುವಿಕೆಯ ಮೂರನೇ ಹಂತ ದಾಟಿದ್ದವು. ಇನ್ನೂ ಒಂದು ವಾರ ಕಳೆದಿದ್ದರೆ ಸುಮಾರು ಒಂದೂವರೆ ಕ್ವಿಂಟಲ್‌ಗೂ ಅಧಿಕ ಗೂಡುಗಳು ಬಂದು ಲಕ್ಷಕ್ಕಿಂತಲೂ ಅಧಿಕ ಹಣ ಬರುತ್ತಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತ ಅಳಲು ತೋಡಿಕೊಂಡರು.

ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಎಂ.ಸಿದ್ದೇಶ್‌,‘ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಹಾನಿಯ ಅಂದಾಜು ವರದಿ ತರಿಸಿಕೊಂಡು ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ’ ಎಂದು ಹೇಳಿದರು.

ಮುದೇನೂರು ಭಾಗದಲ್ಲಿ ಆಲಿಕಲ್ಲು ಮಳೆಗೆ ಹಸು ಸಾವನ್ನಪ್ಪಿದೆ. ಗಾಳಿಗೆ ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿ ಹರಿದು ಬಿದ್ದು ಕುಷ್ಟಗಿ ಪಟ್ಟಣದ ಈದ್ಗಾ ಮೈದಾನದ ಬಳಿ ಜಮೀನು ಹೊಂದಿರುವ ವಿರೂಪಾಕ್ಷಯ್ಯ ಹಿರೇಮಠ ಎಂಬುವವರಿಗೆ ಸೇರಿದ ಎಮ್ಮೆ ಸತ್ತಿದೆ.

ಮಳೆಯ ‍ಪ್ರಮಾಣ

ಕುಷ್ಟಗಿ ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆ ವಿವಿಧ ಮಾಪನ ಕೇಂದ್ರಗಳಲ್ಲಿ ದಾಖಲಾಗಿದೆ. ಅದರ ಮಾಹಿತಿ ಇಲ್ಲಿದೆ.

ಕುಷ್ಟಗಿ 13.4 ಮಿಲಿ ಮೀಟರ್, ಹನುಮಸಾಗರ 6.1, ಹನುಮನಾಳ 3.16, ದೋಟಿಹಾಳ 25.3 ಮತ್ತು ಕಿಲಾರಟ್ಟಿ ಮಳೆ ಮಾಪನ ಕೇಂದ್ರದಲ್ಲಿ 9.6 ಮಿಮೀ ಮಳೆ ದಾಖಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.