ಕೊಪ್ಪಳದಲ್ಲಿ ಶಾವಿಗೆ ಮಾರಾಟದಲ್ಲಿ ನಿರತರಾಗಿದ್ದ ವ್ಯಾಪಾರಿ
ಕೊಪ್ಪಳ: ಒಂದು ತಿಂಗಳ ಕಾಲ ರಂಜಾನ್ ಮಾಸದಲ್ಲಿ ಬಿರುಬಿಸಿಲಿನ ನಡುವೆಯೂ ಉಪವಾಸ ವೃತದ ಆಚರಣೆ ಮಾಡಿರುವ ಮುಸ್ಲಿಮರು ಈಗ ಈದ್–ಉಲ್–ಫಿತ್ರ್ ಸಂಭ್ರಮದಲ್ಲಿದ್ದು, ನಗರದಲ್ಲಿ ಹಬ್ಬದ ಆಚರಣೆಗೆ ಬೇಕಾದ ಸಾಮಗ್ರಿಗಳ ಖರೀದಿ ಮಾಡುತ್ತಿದ್ದಾರೆ.
ಮಕ್ಕಳು, ಮಹಿಳೆಯರು, ಯುವಕರು ಹಾಗೂ ಹಿರಿಯರು ಹೀಗೆ ಮುಸ್ಲಿಂ ಸಮಾಜದ ಪ್ರತಿಯೊಬ್ಬರು ಈ ಹಬ್ಬಕ್ಕೆ ಹೊಸ ಬಟ್ಟೆ, ಸಿಹಿ ಪದಾರ್ಥ ತಯಾರಿಸಲು ಶ್ಯಾವಿಗೆ, ಬಣ್ಣಬಣ್ಣಗಳ ಹಾಗೂ ತರಹೇವಾರಿ ಅಲಂಕಾರಗಳ ಬಳೆಗಳ ಖರೀದಿ, ನಮಾಜ್ ಮಾಡಲು ಟೋಪಿ, ಗಂಧದ ಎಣ್ಣೆ ಹೀಗೆ ಅನೇಕ ಸಾಮಗ್ರಿಗಳ ಖರೀದಿ ಮಾಡುವ ಕೆಲಸ ಮೂರ್ನಾಲ್ಕು ದಿನಗಳಿಂದ ನಡೆಯುತ್ತಲೇ ಇದೆ.
ಹಗಲಿನಲ್ಲಿ ಸಾಕಷ್ಟು ಬಿಸಿಲಿರುವ ಕಾರಣ ಸಂಜೆಯಾಗುತ್ತಿದ್ದಂತೆಯೇ ಇಲ್ಲಿನ ಜವಾಹರ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ ಖರೀದಿಯ ಸಡಗರ ಜೋರಾಗುತ್ತದೆ. ಖರೀದಿ ಸಂಭ್ರಮ ಹಬ್ಬದ ಮುನ್ನಾದಿನವಾದ ಭಾನುವಾರ ಮತ್ತಷ್ಟು ರಂಗೇರುತ್ತದೆ. ಈದ್–ಉಲ್–ಫಿತ್ರ್ ಸಲುವಾಗಿಯೇ ಇಲ್ಲಿನ ವ್ಯಾಪಾರಿಗಳು ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಳೆಗಳನ್ನು ತರಿಸಿದ್ದಾರೆ. ಮುತ್ತಿನ ನಗರಿ ಹೈದರಾಬಾದ್ ಬಳೆಗಳಿಗೆ ವ್ಯಾಪಕ ಬೇಡಿಕೆಯಿದೆ.
ಉತ್ತರ ಪ್ರದೇಶದ ಕುಂದನ್, ಹೈದರಾಬಾದ್‌ನ ಹರಳಿನ ಹಾಗೂ ಮುತ್ತಿನ ಬೆಳೆಗಳು, ಜೈಪುರದ ಸೆಟ್, ಫಿರೋಜಾಬಾದ್‌ನ ಚುಕ್ಕೆ ಮತ್ತು ಕರ್ನಾಟಕದ ಕಿತ್ತೂರಿನ ಹಸಿರು (ಕಾರ್ಲಿ) ಬಳೆಗಳನ್ನು ತರಿಸಲಾಗಿದೆ. ಹೀಗಾಗಿ ಜನರಿಗೆ ತಮಗೆ ಬೇಕಾದ ಬಣ್ಣ ಹಾಗೂ ವಿನ್ಯಾಸದ ಬಳೆಗಳನ್ನು ಆರಿಸಿಕೊಳ್ಳಲು ಸಾಕಷ್ಟು ಅವಕಾಶವೂ ಇದೆ.
‘ಪ್ರತಿ ವರ್ಷ ರಂಜಾನ್ ನಮಗೆ ಪವಿತ್ರ ಮಾಸವಾಗಿದ್ದು, ಉಪವಾಸದ ಆಚರಣೆ ಮುಗಿದ ಬಳಿಕ ಈದ್–ಉಲ್–ಫಿತ್ರ್ ಮಾಡುತ್ತೇವೆ. ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಹೊಸಬಟ್ಟೆ ಧರಿಸುತ್ತೇವೆ. ಈಗ ಬಹುತೇಕ ಮಕ್ಕಳ ಶಾಲೆಗಳಿಗೆ ರಜೆಯಿದ್ದು ಈ ಸಲದ ಹಬ್ಬದ ಸಂಭ್ರಮ ಜೋರಿದೆ. ಬಣ್ಣಬಣ್ಣಗಳ ಬಳೆಗಳನ್ನು ಖರೀದಿಸಿದ್ದೇವೆ’ ಎಂದು ಇಲ್ಲಿನ ಜವಾಹರ ರಸ್ತೆಯಲ್ಲಿರುವ ಗೇಟಿನ್ ಅಂಗಡಿಯಲ್ಲಿ ಬಳೆ ಖರೀದಿಸುತ್ತಿದ್ದ ಮಹಿಳೆಯರು ಹೇಳಿದರು.
ರಂಜಾನ್ ಮಾಸದಲ್ಲಿ ಶಾವಿಗೆ, ಮದರಂಗಿ, ಗಂಧದ ಎಣ್ಣೆ ವ್ಯಾಪಾರ ಮಾಡುವ ಜವಾಹರ ರಸ್ತೆಯ ಅಬ್ದುಲ್ ನಹೀಮ್ ಸಿದ್ದಕಿ ಅವರಿಗೆ ಈದ್–ಉಲ್–ಫಿತ್ರ್ ಬಂದರೆ ಭಾರಿ ಸಂಭ್ರಮ. ವರ್ಷದ ಬಹುತೇಕ ದಿನಗಳಲ್ಲಿ ಗ್ಯಾರೇಜ್ ನಿರ್ವಹಣೆ, ವರ್ಕ್‌ಶಾಪ್‌ನಲ್ಲಿ ಕೆಲಸ ನೋಡಿಕೊಳ್ಳುವ ಅವರು ರಂಜಾನ್ ಸಮಯದಲ್ಲಿ ಹೈದರಾಬಾದ್‌ನಿಂದ ಶಾವಿಗೆ ತಂದು ಮಾರುತ್ತಾರೆ.
ಮೂರೂವರೆ ದಶಕದಿಂದ ಶಾವಿಗೆ ಮಾರಾಟ ಮಾಡುತ್ತಿರುವ ಅವರು ‘ಹೈದರಾಬಾದ್ ಶಾವಿಗೆಗೆ ಬಲು ಬೇಡಿಕೆಯಿದೆ. ಹಾಲಿನಲ್ಲಿ ಹಾಕಿದ ತಕ್ಷಣ ಕರಗುವುದಿಲ್ಲ. ಮುದ್ದೆಯೂ ಆಗುವುದಿಲ್ಲ, ರುಚಿಕರವಾಗಿರುವುದು ಇದರ ವಿಶೇಷ. ಪ್ರತಿ ವರ್ಷದ ಹಬ್ಬದ ಸಮಯದಲ್ಲಿ ಮೂರು ಟನ್ ಶಾವಿಗೆ ಮಾರಾಟ ಮಾಡುತ್ತೇನೆ. ಈ ವ್ಯಾಪಾರದಲ್ಲಿ ಸಿಗುವ ಲಾಭವೇ ದೊಡ್ಡ ಖುಷಿಗೆ ಕಾರಣವಾಗುತ್ತದೆ’ ಎಂದು ತಿಳಿಸಿದರು.
₹100 ಆರಂಭವಾಗಿ ₹1000 ಬೆಲೆ ಬಾಳುವ ತನಕವೂ ನಮ್ಮಲ್ಲಿ ಬಳೆಗಳಿವೆ. ಸೆಟ್ ಬಳೆಗಳ ಬೆಲೆ ಹೆಚ್ಚು. ಹೈದರಾಬಾದ್ ಹಾಗೂ ಜೈಪುರ ಬಳೆಗಳಿಗೆ ಬೇಡಿಕೆ ಹೆಚ್ಚಿದೆಮೊಹಮ್ಮದ್ ಗೌಸ್ ಗೇಟಿನ್ಅಂಗಡಿ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.