ADVERTISEMENT

ಅಭಯಹಸ್ತ ಕಾರ್ಯಕ್ರಮಕ್ಕೆ ಚಾಲನೆ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 5:34 IST
Last Updated 13 ಜುಲೈ 2024, 5:34 IST
ಕಾರಟಗಿ ತಾಲ್ಲೂಕಿನ ಹುಳ್ಕಿಹಾಳ ಕ್ಯಾಂಪ್‌ನಲ್ಲಿ ಶುಕ್ರವಾರ ನಡೆದ ಅಭಯಹಸ್ತ, ಜನತಾದರ್ಶನ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು
ಕಾರಟಗಿ ತಾಲ್ಲೂಕಿನ ಹುಳ್ಕಿಹಾಳ ಕ್ಯಾಂಪ್‌ನಲ್ಲಿ ಶುಕ್ರವಾರ ನಡೆದ ಅಭಯಹಸ್ತ, ಜನತಾದರ್ಶನ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು   

ಕಾರಟಗಿ: ‘ಅಭಯ ಹಸ್ತ ಕಾರ್ಯಕ್ರಮದ ಮೂಲಕ ಅಧಿಕಾರಿಗಳೊಂದಿಗೆ ನೇರವಾಗಿ ಜನರ ಬಳಿ ಹೋಗುತ್ತಿರುವುದರಿಂದ ಸಮಸ್ಯೆಗಳಿಗೆ ಸ್ಥಳದಲ್ಲೇ ಮುಕ್ತಿ ದೊರಕಿದೆ. ಜನರ ಇತರ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲ್ಲೂಕಿನ ಹುಳ್ಕಿಹಾಳ ಕ್ಯಾಂಪ್‌ನಲ್ಲಿ ಶುಕ್ರವಾರ ನಡೆದ ಅಭಯಹಸ್ತ, ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜನರು ಸಿಸಿ ರಸ್ತೆ, ಒಳಚರಂಡಿ ನಿರ್ಮಾಣ, ರುದ್ರಭೂಮಿಗೆ ಸಮರ್ಪಕ ರಸ್ತೆ ನಿರ್ಮಿಸುವುದು, ಸರ್ವೇ ನಂ. 73ರ ರಸ್ತೆ ಜಾಗದ ಅತಿಕ್ರಮಣ ತೆರವು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಜನರ ಬೇಡಿಕೆಗಳ ಬಗ್ಗೆ ಪ್ರಸ್ತಾವ ಸಿದ್ಧಪಡಿಸಿ ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪೃವೃತ್ತರಾಗಬೇಕು ಎಂದು ಎಂಜಿನಿಯರ್ ವಿಜಯಕುಮಾರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೆಂಕಟೇಶ ಅವರಿಗೆ ಸಚಿವರು ಸೂಚಿಸಿದರು.

ಜೆಸ್ಕಾ ಬಿಲ್ ಕಲೆಕ್ಟರ್ ಹಣ ನೀಡಿದ್ದರೂ ಕಚೇರಿಗೆ ಸಂದಾಯ ಮಾಡಿಲ್ಲ. ಆದ್ದರಿಂದ ಫ್ಲೋರ್‌ಮಿಲ್‌ನ ಸಂಪರ್ಕ ಕಡಿತಗೊಂಡಿದೆ ಎಂದು ನಾಗರಿಕರೊಬ್ಬರು ಸಚಿವರ ಗಮನ ಸೆಳೆದರು. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜೆಸ್ಕಾಂ ಎಂಜಿನಿಯರ್‌ ವಿ.ಮಂಜುನಾಥ ಅವರಿಗೆ ಸಚಿವರು ಸೂಚಿಸಿದರು.

ಭೂಮಿ ಸರ್ವೆಗೆ ಅರ್ಜಿ ಸಲ್ಲಿಸಿ 5 ವರ್ಷ ಕಳೆದರೂ ಅಳತೆಗೆ ಬರುತ್ತಿಲ್ ಲಎಂದು ಮುಖಂಡ ಶ್ರೀನಿವಾಸ ಅಳಲು ತೋಡಿ ಕೊಂಡರು. ಸರ್ವೇಯರ್ ರಾಜಶೇಖರ ಅವರನ್ನು ತರಾಟೆಗೆ ತಗೆದುಕೊಂಡ ಸಚಿವರು ಕೂಡಲೇ ಸರ್ವೇ ಮುಗಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಹುಳ್ಕಿಹಾಳ ಗ್ರಾಮಸ್ಥರು ವಿದ್ಯಾರ್ಥಿಗಳ ಓಡಾಟಕ್ಕೆ ಬಸ್‌ನ ವ್ಯವಸ್ಥೆ, 2ನೇ ವಾರ್ಡ್‌ನಲ್ಲಿ ಸಿಸಿ ರಸ್ತೆ ನಿರ್ಮಾಣ, ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್, ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ, ವಾಲ್ಮೀಕಿ ಗುಡಿ ಹತ್ತಿರ ಅಂಗನವಾಡಿ ಕೇಂದ್ರ ಆರಂಭ, ಶಾಲೆಗೆ ಆವರಣಗೋಡೆ, ಚಾಮುಂಡೇಶ್ವರಿ ಕ್ಯಾಂಪ್ ಸೇರಿದಂತೆ ಇತರೆಡೆ ವಿದ್ಯುತ್ ಕಂಬಗಳ ವ್ಯವಸ್ಥೆ, ಮನೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ನಾಯಕ, ತಹಶೀಲ್ದಾರ್ ಎಂ.ಕುಮಾರಸ್ವಾಮಿ, ತಾ.ಪಂ. ಇಒ ಲಕ್ಷ್ಮೀದೇವಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಪಂಚಾಯತ್‌ರಾಜ್ ಎಂಜಿನಿಯರ್ ವಿಜಯಕುಮಾರ್, ಸಿಡಿಪಿಒ ವಿರೂಪಾಕ್ಷಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ವಿಶ್ವನಾಥ ಜಮತ್ನಳ್ಳಿ, ಸಣ್ಣ ನೀರಾವರಿ ಇಲಾಖೆಯ ಸೆಲ್ವಕುಮಾರ ಸೇರಿ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.