ADVERTISEMENT

ಬೇಡಜಂಗಮ ಸಮಾಜಕ್ಕೆ ಮೀಸಲಾತಿ ನೀಡಿ

ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 4:36 IST
Last Updated 13 ಏಪ್ರಿಲ್ 2022, 4:36 IST
ಮುನಿರಾಬಾದ್ ಸಮೀಪ ಹುಲಿಗಿಯಲ್ಲಿ ನಡೆದ ರೇಣುಕಾಚಾರ್ಯರ ಜಯಂತಿ ಅಂಗವಾಗಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು
ಮುನಿರಾಬಾದ್ ಸಮೀಪ ಹುಲಿಗಿಯಲ್ಲಿ ನಡೆದ ರೇಣುಕಾಚಾರ್ಯರ ಜಯಂತಿ ಅಂಗವಾಗಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು   

ಹುಲಿಗಿ (ಮುನಿರಾಬಾದ್): ಆರ್ಥಿಕವಾಗಿ ಅತ್ಯಂತ ಹಿಂದುಳಿದ ಬೇಡಜಂಗಮ ಸಮಾಜಕ್ಕೆ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಹೇಳಿದರು.

ಸಮೀಪದ ಹುಲಿಗಿ ಗ್ರಾಮದಲ್ಲಿ ನಡೆದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೇಡ ಜಂಗಮ ಎಂಬ ಪ್ರಮಾಣ ಪತ್ರ ಸಿಕ್ಕರೆ, ನಮ್ಮ ಮಕ್ಕಳು ಕೂಡ ಹೆಚ್ಚಿನ ಶಿಕ್ಷಣ ಪಡೆದು, ಉನ್ನತ ಹುದ್ದೆಗಳನ್ನು ಸಂಪಾದಿಸಬಹುದು. ಸಮಾಜದ ಜನರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಎಂದರು.

ADVERTISEMENT

ಅಳವಂಡಿ ಸಿದ್ದೇಶ್ವರ ಸಂಸ್ಥಾನ ಮಠದ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಮಕ್ಕಳು ಉನ್ನತ ಗುರಿಯನ್ನು ಇಟ್ಟುಕೊಳ್ಳಬೇಕು. ಅದರ ಸಾಧನೆಗೆ ಶ್ರಮಿಸಬೇಕು. ಸಮಾಜ ಸಂಘಟನೆ ಮತ್ತು ಅಭಿವೃದ್ಧಿ ಮೂಲಮಂತ್ರವಾಗಲಿ ಎಂದರು.

ಬಿಕನಹಳ್ಳಿ ಮಠದ ಸಿದ್ಧೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಭಿಕ್ಷೆ ಬೇಡಿ ಎಲ್ಲಾ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಿದ ಹೆಮ್ಮೆಯ ಜಂಗಮ ಸಮಾಜ ನಮ್ಮದು. ಪಂಚಪೀಠದ ಅನುಯಾಯಿಗಳಾದ ನಮ್ಮ ಸಮಾಜಕ್ಕೆ 4,500 ವರ್ಷಗಳ ಇತಿಹಾಸವಿದೆ. ‘ಸಿದ್ಧಾಂತಶಿಖಾಮಣಿ’ ನಮ್ಮ ಪವಿತ್ರ ಧರ್ಮಗ್ರಂಥವಾಗಿದೆ. ಸಾಮಾನ್ಯರನ್ನು ಶಿವಯೋಗಿಯನ್ನಾಗಿ ಮಾಡುವ ಶಕ್ತಿ ಗುರುವಿಗೆ ಇದೆ ಎಂದರು.

ಸಮಾಜದ ಮುಖಂಡ ಗಿರೀಶ್ ಹಿರೇಮಠ, ಶ್ರೀಶೈಲ ಶಾಖಾಮಠದ ನಾಗಯ್ಯ ಸ್ವಾಮಿ ಮಾತನಾಡಿದರು. ಬೆಳಿಗ್ಗೆ ನಡೆದ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು. ನಗರಗಡ್ಡಿ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.

ಎಂ.ಎ.ಪದವಿಯಲ್ಲಿ ಚಿನ್ನದ ಪದಕ ಪಡೆದ ಜ್ಯೋತಿ ನವೀನಯ್ಯ, ಮುಖ್ಯಮಂತ್ರಿ ಪದಕ ಪಡೆದ ಪಿಎಸ್‌ಐ ಸುಪ್ರೀತ್ ಪಾಟೀಲ್ ಮತ್ತು ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ವೀರಭದ್ರಯ್ಯ ಭೂಸನೂರಮಠ ಸ್ವಾಗತಿಸಿ ಶಿವಪ್ರಕಾಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.