ಕೊಪ್ಪಳ: ಪ್ರಾದೇಶಿಕ ತಾರತಮ್ಯ ತೊಲಗಿಸುವ ಆಶೋತ್ತರದಿಂದಾಗಿ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಹತ್ತು ವರ್ಷಗಳ ಬಳಿಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ, ವಿಮೋಚನಾ ದಿನವಾದ ಸೆ. 17ರಂದೇ ನಿಗದಿಯಾಗಿದ್ದು, ಹಲವು ವರ್ಷಗಳಿಂದ ಜಿಲ್ಲೆಯ ಜನರ ಬೇಡಿಕೆಗಳ ಕಾಯುವಿಕೆಗೂ ವಿಮೋಚನೆ ಸಿಗಬಹುದು ಎನ್ನುವ ನಿರೀಕ್ಷೆ ಗರಿಗೆದರಿದೆ.
2014ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಈಗ ಮತ್ತೆ ಅವರ ಮುಂದಾಳತ್ವದಲ್ಲಿಯೇ ಸಭೆ ನಿಗದಿಯಾಗಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ, ಕಲಬುರಗಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಜನರ ಬೇಡಿಕೆಗಳಿಗೆ ಮನ್ನಣೆ ಸಿಗುತ್ತದೆ ಎನ್ನುವ ಭರವಸೆ ಜನರಲ್ಲಿದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತೋಟಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕಾ ಹೈಟೆಕ್ನಾಲಜಿ ಪಾರ್ಕ್ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಗೆ ನಾಲ್ಕು ವರ್ಷಗಳಾದರೂ ಮನ್ನಣೆ ಸಿಕ್ಕಿಲ್ಲ. 2020–21ರಲ್ಲಿ ಆಗಿನ ಬಿಜೆಪಿ ಸರ್ಕಾರ ಈ ಯೋಜನೆ ಬಜೆಟ್‌ನಲ್ಲಿ ಘೋಷಣೆ ಮಾಡಿ ಸುಮ್ಮನಾಗಿತ್ತು. ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ತೋಟಗಾರಿಕಾ ಟೆಕ್ನಾಲಜಿ ಪಾರ್ಕ್‌ಗೆ ಅನುಮೋದನೆ ಹಾಗೂ ಅನುದಾನ ಒದಗಿಸುವ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ.
ಮಹಾತ್ವಕಾಂಕ್ಷಿ ಪಾರ್ಕ್ ಆರಂಭವಾದರೆ ಉತ್ತರ ಕರ್ನಾಟಕದ ಜಿಲ್ಲೆಗಳ ತೋಟಗಾರಿಕಾ ಬೆಳೆಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ, ಸಂಸ್ಕರಣೆ, ಮೌಲ್ಯವರ್ಧನೆ, ಹೈಟೆಕ್ ತಂತ್ರಜ್ಞಾನದ ಬಳಕೆ ಸಾಧ್ಯವಾಗುತ್ತದೆ. ರೈತರ ಆರ್ಥಿಕ ಪ್ರಗತಿಯೂ ಆಗುತ್ತದೆ.
ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಕ್ಷೇತ್ರದಲ್ಲಿ ಈಗಾಗಲೇ ರೈಸ್ ಟೆಕ್ನಾಲಜಿ ಪಾರ್ಕ್ ಆರಂಭವಾಗಿದ್ದರೂ ಬಳಕೆಗೆ ಮುಕ್ತವಾಗಿಲ್ಲ. ತೋಟಗಾರಿಕಾ ಪಾರ್ಕ್ ಕೂಡ ಇದೇ ರೀತಿಯಲ್ಲಿ ಆಗದಂತೆ ಎಚ್ಚರಿಕೆ ವಹಿಸಲು ಸರ್ಕಾರ ಈ ಬಾರಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೆ ಮುಂದಾಗಿದೆ.
ರಾಜ್ಯ ಸರ್ಕಾರ ಭೂಮಿ, ನೀರು, ವಿದ್ಯುತ್, ರಸ್ತೆ ಸೌಲಭ್ಯ ಕಲ್ಪಿಸಿದರೆ, ಖಾಸಗಿ ಸಂಸ್ಥೆ ಶೇ 75ರಷ್ಟು ಅನುದಾನ ಹಾಕುತ್ತದೆ. ಮೂರು ದಶಕದ ಲೀಸ್ ಆಧಾರದ ಮೇಲೆ ಯೋಜನೆ ಆರಂಭಿಸುವ ಬಗ್ಗೆ ಪ್ರಸ್ತಾಪವಿದ್ದು, ನರ್ಸರಿ, ಬೈಬ್ಯಾಕ್ ಒಪ್ಪಂದ, ತೋಟಗಾರಿಕಾ ಪ್ರದೇಶ ಹೆಚ್ಚಳ, ನಿಶ್ಚಿತ ಆದಾಯ, ಉದ್ಯೋಗದ ಅವಕಾಶ ಲಭಿಸುತ್ತವೆ. ಇದಕ್ಕಾಗಿ ಈಗಾಗಲೇ ಡಿಪಿಆರ್ ಸಿದ್ಧವಾಗಿದ್ದು ಕನಕಗಿರಿ ತಾಲ್ಲೂಕಿನ ಸಿರವಾರ ಬಳಿ ಜಾಗ ಗುರುತಿಸಲಾಗಿದೆ. ಆದರೆ, ಅಲ್ಲಿ ಕೆಲವು ಖಾಸಗಿ ಜಮೀನುಗಳ ಮಾಲೀಕರು ಜಮೀನು ನೀಡುತ್ತಿಲ್ಲ. ಭೂಸ್ವಾಧೀನ ಆರಂಭಿಸಿದರೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಇರುವ ಭೂಮಿಯಲ್ಲಿ ಮೊದಲು ಪಾರ್ಕ್ ಆರಂಭಿಸಲು ’ಸಂಪುಟ ಸಭೆ’ಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನವಲಿ ಸಮಾನಾಂತರ ಜಲಾಶಯ: ಕನಕಗಿರಿ ವಿಧಾನಸಭಾ ಕ್ಷೇತ್ರದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆಯಿದ್ದರೂ ಈ ಯೋಜನೆಗೆ ಸಂಬಂಧಿಸಿದ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ಯಾವ ಪ್ರಯತ್ನಕ್ಕೂ ಮುಂದಾಗಿಲ್ಲ.
ಇತ್ತೀಚೆಗೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಂಡಿ ಕಳಚಿ 30 ಟಿಎಂಸಿ ಅಡಿ ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ಮಲೆನಾಡಿನ ಭಾಗದಲ್ಲಿ ಉತ್ತಮವಾಗಿ ಮಳೆಯಾಗಿ ಜಲಾಶಯ ತುಂಬಿದಾಗಲೆಲ್ಲ ನೀರು ನದಿ ಪಾಲಾಗುತ್ತದೆ. ಹೀಗಾಗಿ ನವಲಿ ಬಳಿ ಜಲಾಶಯದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಕ್ರಸ್ಟ್ ಗೇಟ್ ಕೊಂಡಿ ಕಳಚಿದ್ದಾಗ ಯೋಜನೆಗೆ ಸಂಬಂಧಿಸಿದ ರಾಜ್ಯಗಳ ಜನಪ್ರತಿನಿಧಿಗಳೂ ಯೋಜನೆ ಬಗ್ಗೆ ಚರ್ಚೆ ಮಾಡಿದ್ದರು. ಇದು ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ ವಿಚಾರವಾದ ಕಾರಣ ‘ಕಲ್ಯಾಣದ ಸಂಪುಟ’ ಸಿಹಿ ನೀಡಬಹುದು ಎನ್ನುವ ನಿರೀಕ್ಷೆಯಿದೆ. ಜಲ ಸಂಪನ್ಮೂಲ ಇಲಾಖೆ ಬೇರೆ ರಾಜ್ಯಗಳ ಜೊತೆ ಸಮಾನಾಂತರ ಜಲಾಶಯ ಬಗ್ಗೆ ಚರ್ಚಿಸಲು ಒಂದು ಹೆಜ್ಜೆ ಮುಂದಿಡಬಹುದು ಎನ್ನುವ ಆಶಯ ಜಿಲ್ಲೆಯ ಜನರದ್ದಾಗಿದೆ.
ತೋಟಗಾರಿಕಾ ಹೈ ಟೆಕ್ನಾಲಜಿ ಪಾರ್ಕ್ ಬಗ್ಗೆ ವಿವರವಾಗಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಲಾಗಿದ್ದು ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ
– ಕೃಷ್ಣ ಉಕ್ಕುಂದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕೊಪ್ಪಳ
ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆ ಪ್ರಗತಿಗೆ ಅನುಕೂಲವಾಗುವ ವಿಷಯಗಳನ್ನೇ ಆರಿಸಿಕೊಳ್ಳಲಾಗಿದೆ. ಸಭೆಗೂ ಮೊದಲು ಅದನ್ನು ಬಹಿರಂಗಪಡಿಸಲು ಬರುವುದಿಲ್ಲ
– ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಯ ಜನರ ನಿರೀಕ್ಷೆಗಳು
* ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಬೇಕಿದೆ ಆದ್ಯತೆ.
* ಆರು ವರ್ಷಗಳ ಹಿಂದೆಯೇ ರಚನೆಯಾದ ಹೊಸ ತಾಲ್ಲೂಕುಗಳಿಗೆ ಬೇಕಿದೆ ಕಟ್ಟಡಗಳ ಸೌಲಭ್ಯ.
* ಗಂಗಾವತಿ ಕನಕಗಿರಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ಸ್ಥಳಗಳಿದ್ದರೂ ಅಭಿವೃದ್ಧಿಯಾಗದ ಪ್ರವಾಸೋದ್ಯಮ.
* ಜಿಲ್ಲಾ ಕೇಂದ್ರದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಆರಂಭಕ್ಕೆ ಬೇಕಿದೆ ಪ್ರಯತ್ನ.
* ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಆರಂಭಕ್ಕೆ ಬೇಕಿದೆ ಆದ್ಯತೆ.
* ಜಿಲ್ಲೆಯ ಗ್ರಾಮೀಣ ಮತ್ತು ಜಿಲ್ಲಾಕೇಂದ್ರದಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ.
* ಕೊಪ್ಪಳ ಜಿಲ್ಲೆಯ ಕ್ರೀಡಾಚಟುವಟಿಕೆಗೆ ಉತ್ತೇಜನ ನೀಡಲು ಜಿಲ್ಲಾಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.