ಕೊಪ್ಪಳ: ವಿಜಯಪುರದ ಸಿದ್ದೇಶ್ವರ ಸಂಸ್ಥೆ ಹಾಗೂ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘದಿಂದ ಇಲ್ಲಿನ ಗವಿಸಿದ್ದೇಶ್ವರ ಮಠದ ದಾಸೋಹಕ್ಕಾಗಿ 101 ಕ್ವಿಂಟಲ್ ಅಕ್ಕಿ, 5001 ವಿಭೂತಿ, 5 ಕೆ.ಜಿ. ಕುಂಕಮ ಮತ್ತು 5 ಕೆ.ಜಿ. ತುಪ್ಪ ನೀಡಲಾಯಿತು.
ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಸಿದ್ದೇಶ್ವರ ಸಂಸ್ಥೆಯ ರಾಮನಗೌಡ ಬಾ.ಪಾಟೀಲ ಯತ್ನಾಳ ಗೋರಕ್ಷಾ ಕೇಂದ್ರದಲ್ಲಿ ಸಿದ್ದಪಡಿಸಲಾದ ವಿಭೂತಿ, ಕುಂಕುಮ, ತುಪ್ಪ ನೀಡಲಾಗಿದೆ’ ಎಂದು ತಿಳಿಸಿದರು.
‘ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಹಾಗೂ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ಜನರ ಎರಡು ಕಣ್ಣುಗಳಂತೆ ಇದ್ದು, ಎಲ್ಲರಿಗೂ ಆದರ್ಶವಾಗಿದ್ದಾರೆ. ಈಗಿನ ಕೆಲ ಸ್ವಾಮೀಜಿಗಳು ಖಾವಿ ವೇಷತೊಟ್ಟು ರಾಜಕಾರಣ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಹೇಗೆ ಇರಬೇಕು ಎನ್ನುವುದಕ್ಕೆ ಕೊಪ್ಪಳದ ಗವಿಮಠದ ಸ್ವಾಮೀಜಿ ಸಾಕ್ಷಿಯಂತಿದ್ದಾರೆ’ ಎಂದರು.
ಹೊಸ ಪಕ್ಷ: ‘ವಿಜಯೇಂದ್ರನನ್ನು ಮತ್ತೆ ಅಧ್ಯಕ್ಷ ಮಾಡಿ ಬಿಜೆಪಿಯವರು ತಲೆ ಮೇಲೆ ಕೂಡಿಸಿಕೊಂಡರೆ ಅಂದೇ ಹೊಸ ಪಕ್ಷ ಘೋಷಣೆ ನಿಶ್ಚಿತ. ರಾಜ್ಯದಲ್ಲಿ ಯಾರೂ ವಿಜಯೇಂದ್ರ ನಾಯಕತ್ವ ಒಪ್ಪಿಸಿಕೊಂಡಿಲ್ಲ. ವಿಜಯೇಂದ್ರ ಬಿಟ್ಟು ಬೇರೆ ಯಾರೇ ಅಧ್ಯಕ್ಷರಾದರೂ ಒಪ್ಪಿಕೊಳ್ಳುವೆ. ನಾನು ಬಿಜೆಪಿಯಲ್ಲಿಯೇ ಇರುವೆ. ಪಕ್ಷ ಬಿಟ್ಟು ಎಲ್ಲಿಯೂ ಹೋಗಿಲ್ಲ. ಯಡಿಯೂರಪ್ಪ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ನನ್ನನ್ನು ಹೊರಗಡೆ ಹಾಕಿದ್ದಾನೆ ಅಷ್ಟೇ ಎಂದರು.
ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ನಿರ್ದೇಶಕರಾದ ಬಸವರಾಜ ಸೂಗೂರ, ಸದಾಶಿವ ಗುಡ್ಡೋಡಗಿ, ಎನ್.ಎಂ.ಗೊಲಾಯಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಮಲಕಪ್ಪ ಗಾಣಿಗೇರ, ಸಾಯಿಬಣ್ಣ ಭೋವಿ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ನಿರ್ದೇಶಕರಾದ ಪ್ರಭುಗೌಡ ದೇಸಾಯಿ, ಕನಕಗೌಡರ ಪಾಲ್ಗೊಂಡಿದ್ದರು.
ಬಿ.ವೈ. ವಿಜಯೇಂದ್ರನ ನಾಯಕತ್ವವನ್ನು ಯಾರೂ ಒಪ್ಪಿಕೊಂಡಿಲ್ಲ. ಆತನ ನೇತೃತ್ವದಲ್ಲಿ ಚುನಾವಣೆ ಎದುರಿಸಿದ 30 ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷ ಗೆಲ್ಲುವುದಿಲ್ಲ. ರಾಮುಲು ವಿಜಯೇಂದ್ರನನ್ನು ಒಪ್ಪಿಕೊಂಡಿದ್ದು ವಿಷಾದ.ಬಸನಗೌಡ ಪಾಟೀಲ ಯತ್ನಾಳ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.