ಪ್ರಜಾವಾಣಿ ವಾರ್ತೆ
ಕೊಪ್ಪಳ: ‘ಸರ್ಕಾರಿ ಗೋದಾಮಿನಿಂದಲೇ ಅನ್ನಭಾಗ್ಯ ಅಕ್ಕಿಯನ್ನು ದುಬೈ ಮೂಲದ ವಿಳಾಸದ ಚೀಲಗಳಲ್ಲಿ ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣದಲ್ಲಿ ದೊಡ್ಡ ಕುಳಗಳ ಕೈವಾಡ ಇದೆ. ಕೇವಲ ಗುತ್ತಿಗೆ ಆಧಾರದ ಒಬ್ಬ ನೌಕರನಿಂದ ಇಂಥ ದೊಡ್ಡ ಹಗರಣ ನಡೆಯಲು ಸಾಧ್ಯವೇ ಇಲ್ಲ. ಹೀಗಿದ್ದರೂ ಆಹಾರ ಇಲಾಖೆ ಹಿಂದಿನ ಉಪನಿರ್ದೇಶಕರನ್ನು ನಾಟಕೀಯವಾಗಿ ಮಾತೃ ಇಲಾಖೆಗೆ ಎತ್ತಂಗಡಿ ಮಾಡುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದ್ದಾರೆ.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯ ಸರ್ಕಾರ ಈ ವಿಷಯದಲ್ಲಿ ಅಸಮರ್ಥವಾಗಿದ್ದು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು ಭ್ರಷ್ಟ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ನಡೆಸುತ್ತಿರುವ ಅಕ್ರಮಕ್ಕೆ ಗಂಗಾವತಿಯ ಅಕ್ಕಿ ಕಳ್ಳಸಾಗಣೆ ಹಗರಣ ಉದಾಹರಣೆಯಾಗಿದೆ. ವಿಶೇಷ ತಂಡ ರಚಿಸುವ ಮೂಲಕ ಸಮಗ್ರ ತನಿಖೆ ನಡೆಸಿ ಇದರಲ್ಲಿ ಯಾರು ಯಾರು ಶಾಮೀಲಾಗಿದ್ದಾರೆ? ಅವರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಈಗಲಾದರೂ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಕೆಎಸ್‌ಎಫ್‌ಸಿ ವ್ಯವಸ್ಥಾಪಕರಾಗಿದ್ದ ಸೋಮಶೇಖರ ಬುಡ್ಡಣ್ಣನವರ ಒಂದು ದಿನವೂ ಗೋದಾಮಿಗೆ ಬಂದು ದಾಸ್ತಾನು ಪರಿಶೀಲಿಸುತ್ತಿರಲಿಲ್ಲ. ಬದಲಾಗಿ ಪಡಿತರ ಅಕ್ಕಿ ಸಾಗಣೆ ವೇಳೆ ಖುದ್ದಾಗಿ ಹಾಜರಿರದೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಜುಬೇರ್ ಎಂಬಾತನಿಗೆ ಗೋದಾಮಿನ ಕೀಲಿ ಕೊಟ್ಟು ಅಕ್ಕಿ ಕಳ್ಳ ಸಾಗಣೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುತ್ತಾರೆ. ಪ್ರಕರಣ ಬಯಲಿಗೆ ಬಂದ ತಕ್ಷಣ ಗೋದಾಮು ವ್ಯವಸ್ಥಾಪಕರನ್ನು ಅಮಾನತು ಮಾಡಲಾಯಿತು. ಆದರೆ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವ ಹೊರಗುತ್ತಿಗೆ ನೌಕರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ದಶಕಗಳಿಂದಲೂ ಭಾರಿ ಪ್ರಮಾಣದಲ್ಲಿ ಅಕ್ಕಿ ಕಳ್ಳಸಾಗಣೆ ಹಗರಣಗಳಿಗೆ ಈ ನೌಕರನೇ ಮೂಲ ಕಾರಣನಾಗಿದ್ದು ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.