ADVERTISEMENT

ಕೊಪ್ಪಳ: ಹಣ ವಸೂಲಿ, ಕ್ಯಾಮೆರಾ ಕಂಡು ದಿಕ್ಕೆಟ್ಟು ಓಡಿದ ಆರ್‌ಟಿಒ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 8:32 IST
Last Updated 9 ಡಿಸೆಂಬರ್ 2022, 8:32 IST
ಹಣ ವಸೂಲು ಮಾಡುತ್ತಿದ್ದ ಆರ್‌ಟಿಒ ಅಧಿಕಾರಿಗಳು ಮಾಧ್ಯಮಗಳ ಕ್ಯಾಮೆರಾಗಳನ್ನು ಕಂಡು ದಿಕ್ಕಾಪಾಲಾಗಿ ಓಡಿ ಹೋದರು.
ಹಣ ವಸೂಲು ಮಾಡುತ್ತಿದ್ದ ಆರ್‌ಟಿಒ ಅಧಿಕಾರಿಗಳು ಮಾಧ್ಯಮಗಳ ಕ್ಯಾಮೆರಾಗಳನ್ನು ಕಂಡು ದಿಕ್ಕಾಪಾಲಾಗಿ ಓಡಿ ಹೋದರು.   

ಕೊಪ್ಪಳ: ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ (ಕೊಪ್ಪಳ ತಾಲ್ಲೂಕಿನ ಕೆರೆಹಳ್ಳಿ ಹತ್ತಿರ) ವಾಹನಗಳ ಚಾಲಕರಿಂದ ಅಕ್ರಮವಾಗಿ ಹಣ ವಸೂಲು ಮಾಡುತ್ತಿದ್ದ ಆರ್‌ಟಿಒ ಅಧಿಕಾರಿಗಳು ಮಾಧ್ಯಮಗಳ ಕ್ಯಾಮೆರಾಗಳನ್ನು ಕಂಡು ದಿಕ್ಕಾಪಾಲಾಗಿ ಓಡಿ ಹೋದರು.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿಗೆ ಶುಕ್ರವಾರ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಭೇಟಿ ನೀಡಿದ್ದರು. ಈ ಕಾರ್ಯಕ್ರಮದ ವರದಿಗೆ ತೆರಳಿ ವಾಪಸ್‌ ಬರುವಾಗ ವಾರ್ತಾ ಇಲಾಖೆಯ ವಾಹನವನ್ನು ಅಧಿಕಾರಿಗಳು ತಡೆದು ನಿಲ್ಲಿಸಿದರು. ಯಾಕೆಂದು ಪ್ರಶ್ನಿಸಿದಾಗ ಏನೂ ಉತ್ತರಿಸಲಿಲ್ಲ.

ಇದೇ ವೇಳೆ ಆರ್‌ಟಿಒ ಕಚೇರಿಯ ಬ್ರೇಕ್‌ ಇನ್‌ಸ್ಟೆಕ್ಟರ್‌ ಜವರೇಗೌಡ ಅವರಿಗೆ ಲಾರಿ ಚಾಲಕನೊಬ್ಬ ₹50 ಕೊಡಲು ಬಂದಾಗ ಮಾಧ್ಯಮ ಪ್ರತಿನಿಧಿಗಳು ಕ್ಯಾಮೆರಾದಲ್ಲಿ ಅದನ್ನು ದಾಖಲಿಸಲು ಮುಂದಾದರು. ಇದನ್ನು ಕಂಡ ಆರ್‌ಟಿಒ ಸಿಬ್ಬಂದಿ ಗಲಿಬಿಲಿಗೊಂಡು ರಸ್ತೆಯ ಪಕ್ಕದಲ್ಲಿದ್ದ ಹೊಲದಲ್ಲಿ ಓಡಿ ಹೋದರು. ಅವರನ್ನು ಮಾಧ್ಯಮದವರು ಬೆನ್ನಟ್ಟಿದಾಗ ಹಣ ತುಂಬಿದ ಚೀಲವನ್ನು ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದ ಚಿತ್ರಣ ಕಂಡುಬಂತು.

ADVERTISEMENT

‘ಯಾಕೆ ಓಡುವಿರಿ ನೀವು ಅಧಿಕಾರಿಗಳು ಹೌದೊ ಅಲ್ಲವೊ’ ಎಂದು ಪ್ರಶ್ನಿಸಿದಾಗ ಉತ್ತರ ಕೊಡದೆ ಸಿಬ್ಬಂದಿ ಓಡಿ ಹೋದರು.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕೊಪ್ಪಳ ಆರ್‌ಟಿಒ ಲಕ್ಷ್ಮಿಕಾಂತ್‌ ‘ಜವರೇಗೌಡ ಎಂಬುವರು ನಮ್ಮಲ್ಲಿ ಬ್ರೇಕ್‌ ಇನ್‌ಸ್ಟೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಘಟನೆಯ ಪೂರ್ಣ ಮಾಹಿತಿ ತರಿಸಿಕೊಳ್ಳುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.